ಜಿಲ್ಲೆಯಲ್ಲಿ ಮುಂಗಾರು ಚುರುಕು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.10
ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಮಳೆಯಾಶ್ರಿತ ಬೆಳೆಗಳ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ದಿನ ದಿನಕ್ಕೂ ಮಳೆಯ ಪ್ರಮಾಣ ಅಧಿಕಗೊಳ್ಳುತ್ತಿದ್ದು, ಸೋಮವಾರ ಜಿಲ್ಲೆಯ ಮಲೆನಾಡಿನಲ್ಲಿ ಮುಂಗಾರಿನ ವೈಭವ ಮರುಕಳಿಸಿತ್ತು.
ಬರ ಪೀಡಿತ ತರೀಕೆರೆ ಹಾಗೂ ಕಡೂರು ತಾಲೂಕಿನ ಹಲವೆಡೆ ಮಳೆಯಾಗಿದ್ದು. ಭೂಮಿ ಹದಗೊಳಿಸುವ ಹಾಗೂ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇತ್ತ ಮಲೆನಾಡಿನಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಆಲ್ದೂರು- 4 ಮಿ.ಮೀ., ಕೊಪ್ಪ- 7.2, ಹರಿಹರಪುರ- 8.1, ಜಯಪುರ- 5.6, ಕಮ್ಮರಡಿ- 9.7, ಬಸರೀಕಟ್ಟೆ- 4.2, ಮೂಡಿಗೆರೆ- 8.4, ಕೊಟ್ಟಿಗೆಹಾರ- 27, ಕಳಸ- 12, ಎನ್.ಆರ್.ಪುರ- 12, ಬಾಳೆಹೊನ್ನೂರು- 1.2, ಶೃಂಗೇರಿ- 6.8, ಕಿಗ್ಗಾ- 7.6, ಕೆರೆಕಟ್ಟೆ- 13.2, ಲಕ್ಕವಳ್ಳಿ- 8.5 ಮಿ.ಮೀ. ಮಳೆಯಾಗಿದೆ.
ಮಲೆನಾಡಿನಲ್ಲಿ ಸೋಮವಾರ ಮಳೆ ಮುಂದುವರೆದಿದ್ದು, ಚಿಕ್ಕಮಗಳೂರು ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಸಂಜೆಯ ನಂತರ ಮಳೆ ಮುಂದುವರೆದಿತ್ತು.
ಥಂಡಿ ಗಾಳಿ: ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದರಿಂದ ಥಂಡಿ ಗಾಳಿ ಬೀಸುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಜರ್ಕಿನ್, ಛತ್ರಿಗಳಿಗೆ ಜನರು ಮೊರೆ ಹೋಗಿದ್ದಾರೆ. ಥಂಡಿ ಗಾಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆ ಉಡುಪುಗಳಿಗೆ ಬೇಡಿಕೆ ಹೆಚ್ಚಿದೆ.
ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ಬೆಚ್ಚನೆ ಉಡುಪುಗಳ ಮಾರಾಟದ ಮಳಿಗೆಗಳನ್ನು ತೆರೆಯಲಾಗಿದ್ದು, ಜನರು ಅವುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಥಂಡಿ ಗಾಳಿಯ ಪ್ರಮಾಣ ಅಧಿಕವಾಗಿದೆ. ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ.