ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭೂ ಹಿಡುವಳಿದಾರರ ತೆರವಿಗೆ ವಿರೋಧ

Lingaraj Badiger
Updated On : 11 Jun 2013, 11:16 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.10
ತಾಲೂಕಿನ ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ದಾಖಲೆಗಳನ್ನು ಹೊಂದಿರುವ ಕಂದಾಯ ಭೂಮಿ ಹಿಡುವಳಿದಾರರನ್ನು ಯಾವುದೇ ಕಾರಣಕ್ಕೂ ಅಲ್ಲಿಂದ ತೆರವುಗೊಳಿಸಬಾರದು ಎಂದು ಆ ಭಾಗದ ಕೃಷಿಕರು ಮತ್ತು ಬೆಳೆಗಾರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರ ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರವಿರಾಜ್ ನಾರಾಯಣ ಅವರನ್ನು ಭೇಟಿ ಮಾಡಿದ ಕೃಷಿಕರು ಈ ಸಂಬಂಧ ಮನವಿ ಸಲ್ಲಿಸಿದರು.
957.16 ಎಕರೆ ಭೂಮಿ: ಕಂದಾಯ ಇಲಾಖೆಯ ಕಾರ್ಯದರ್ಶಿ ಎಸ್.ಎಂ. ಜಾಮ್‌ದ್ಯಾರ್ ನೇತೃತ್ವದ ಕಂದಾಯ, ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಮಸಗಲಿ ಮೀಸಲು ಅರಣ್ಯ ಪ್ರದೇಶದ ಗ್ರಾಮಗಳಿಗೆ ಈ ಹಿಂದೆ ಭೇಟಿ ನೀಡಿ ಸರ್ವೇ ನಡೆಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರಣ್ಯ ಪ್ರದೇಶದೊಳಗೆ 957.16 ಎಕರೆ ಭೂಮಿ ಕಂದಾಯ ಇಲಾಖೆಗೆ ಸೇರಿರುತ್ತದೆ ಎಂದು ಹೇಳಿದ್ದು, ಆ ವರದಿಯನ್ನು ದಾಖಲೆಗಳ ಸಮೇತ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಮೂಲಕ ಹಿಡುವಳಿದಾರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಅರಣ್ಯ, ಕಂದಾಯ ಲೋಪ: ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಯನ್ನು ರೂಪಿಸುವುದಕ್ಕಿಂತ ಮೊದಲೇ ಹತ್ತಾರು ತಲೆಮಾರುಗಳಿಂದ ಮಸಗಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಕೃಷಿಕರು, ಬೆಳೆಗಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಅಲ್ಪಸ್ವಲ್ಪ ಜಾಗವನ್ನು ಹಿಡುವಳಿ ಮಾಡಿ ಮನೆ ನಿರ್ಮಿಸಿಕೊಂಡಿದ್ದು ಅದಕ್ಕೆ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಸಹ ಅದರಲ್ಲಿ 20-25 ಕುಟುಂಬಗಳನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಗುರುತಿಸದೇ ಕೈಬಿಟ್ಟಿವೆ ಎಂದು ಆರೋಪಿಸಿದರು.
ಮೇಲ್ಕಂಡ ಕುಟುಂಬಗಳನ್ನು ದಾಖಲಾತಿಗಳ ಪ್ರಕಾರ ಮರುಪರಿಶೀಲಿಸಿ ಅವರುಗಳ ಹಿಡುವಳಿ ಪ್ರದೇಶದನ್ವಯ 2-3 ಎಕರೆ ಪ್ರದೇಶಗಳನ್ನು ಅವರಿಗೇ ನೀಡಬೇಕು. ಕನಿಷ್ಟ ಮೂರು ತಲೆಮಾರಿನಿಂದ ವಾಸವಾಗಿರುವ ಹಿಡುವಳಿದಾರರನ್ನು ಖುಲ್ಲಾಗೊಳಿಸದೇ ಅಲ್ಲೇ ಉಳಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ನಾರಾಯಣ, ಮಸಗಲಿ ಮೀಸಲು ಅರಣ್ಯ ಪ್ರದೇಶದ ಸಮೀಕ್ಷೆ ಕಾರ್ಯ ಇದುವರೆಗೆ ಅಪೂರ್ಣಗೊಂಡಿದ್ದು ಅದು ಪೂರ್ಣಗೊಂಡ ನಂತರ ಪರಿಶೀಲಿಸುವುದಾಗಿ ತಿಳಿಸಿದರು. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರ ರೈತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಜಿ. ಗಿರೀಶ್, ಕಾರ್ಯದರ್ಶಿ ಎಂ.ಎಲ್.
ಬಸವರಾಜ್, ಹೆಚ್.ಎಂ. ಮಂಜುನಾಥ್, ಪೂರ್ಣೇಶ್, ಪ್ರಕಾಶ್, ಪೃಥ್ವಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement