'ಸಕಾಲ ಸೇವೆಗಳ ಅಧಿಕ ಬಳಕೆ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.11
ಸಾರ್ವಜನಿಕರು ಸಕಾಲದಡಿ ಬರುವ 265 ಸೇವೆಗಳ ಪೈಕಿ 203 ಸಕಾಲ ಸೇವೆಗಳನ್ನು ಅಧಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಸಕಾಲ ಮಂಡಳಿಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಹೇಳಿದ್ದಾರೆ.
ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಸಕಾಲ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಕಾಲ ನಾಗರಿಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ಖಾತರಿ ಪಡಿಸುವುದಾಗಿದ್ದು, ಸಕಾಲದಡಿ 265 ಸೇವೆಗಳಿವೆ. ಅವುಗಳಲ್ಲಿ 203 ಸೇವೆಗಳನ್ನು ಸಾರ್ವಜನಿಕರು ಬಳಕೆ ಮಾಡಿಕೊಂಡಿದ್ದಾರೆ.
193 ಸೇವೆಗಳನ್ನು ನಿಗದಿತ ಸಮಯಕ್ಕಿಂತ ಮೊದಲು, 5 ಸೇವೆಗಳನ್ನು ನಿಗದಿತ ಸಮಯದಲ್ಲಿ ಹಾಗೂ 5 ಸೇವೆಗಳನ್ನು ನಿಗದಿತ ಸೇವೆಗಳ ಕಾಲಮಿತಿ ಮೀರಿ ಒದಗಿಸುತ್ತಿರುವುದು ಕಂಡು ಬಂದಿದೆ ಎಂದರು.
ಸಕಾಲದಡಿ ಅರ್ಜಿಗಳನ್ನು ತಿರಸ್ಕೃತ ಪ್ರಮಾಣವನ್ನು ಕಡಿಮೆಗೊಳಿಸಬೇಕೆಂದ ಅವರು ರಾಜ್ಯದಲ್ಲಿ ಸಕಾಲ ಯೋಜನೆ ಜಾರಿಗೆ ಬಂದು ಒಂದು ವರ್ಷವಾಗಿದ್ದು, ಈವರೆಗೆ 2.42 ಕೋಟಿಗೂ ಅಧಿಕ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2.28 ಕೋಟಿ ಗಿಂತಲು ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿ, ಶೇ. 96.37 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಈ-ಜನಸ್ಪಂಧನ ಯೋಜನೆ ಜಾರಿಗೆ ಬರಲಿದ್ದು, ನಾಗರಿಕರು ರಾಜ್ಯದಾದ್ಯಂತ ಒಂದೇ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಕಾಲ ಮಂಡಳಿ ಆಡಳಿತಾಧಿಕಾರಿ ವರಪ್ರಸಾದ್ ರೆಡ್ಡಿ ಮಾತನಾಡಿ, ಎಲ್ಲಾ ಇಲಾಖೆಯವರು ತಮ್ಮ ಕಾರ್ಯಶ್ರಮತೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಅನಗತ್ಯ ವಿಳಂಬ ಹಾಗೂ ಅರ್ಜಿಗಳ ತಿರಸ್ಕರಿಸದೆ ನಿಗದಿತ ಸಮಯದಲ್ಲಿ ಸೇವೆ ಒದಗಿಸುವುದು ಸೂಕ್ತ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಚಂದ್ರ, ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.