ಆರೋಪಿ ಮೇಲೆ ಕ್ರಮ ಕೈಗೊಳ್ಳದ ಪೊಲೀಸರು: ಸುಶೀಲಮ್ಮ ಆರೋಪ
ಕ.ಪ್ರ.ವಾರ್ತೆ ಕೊಪ್ಪ ಜೂ.12 ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರೂ, ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಪಂ ಮಾಜಿ ಉಪಾಧ್ಯಕ್ಷೆ ಸುಶೀಲಮ್ಮ ಆರೋಪಿಸಿದರು.
ಇವರು ಮೇಗುಂದಾ ಹೋಬಳಿಯ ಕಲ್ಲುಗುಡ್ಡೆ ತಾಪಂ ಕ್ಷೇತ್ರದ ಚುನಾಯಿತರಾಗಿ ಕೊಪ್ಪ ತಾಪಂ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ, ನಂತರ ಸಕ್ರಿಯಾ ಸದಸ್ಯೆಯಾಗಿದ್ದರು.
ಪತಿಯಿಂದಲೇ ಹಿಂಸೆ:: ಇತ್ತೀಚಿನ ದಿನಗಳಲ್ಲಿ ತಮ್ಮದೇ ತೋಟದಲ್ಲಿ ಬೆಳೆದ ಅಡಿಕೆ, ಕಾಳುಮೆಣಸು ಬೆಳೆಯಿಂದಾಗಿ ಬರುತ್ತಿರುವ ಉತ್ತತ್ತಿಯ ಭಾಗದಲ್ಲಿ ಪತಿ ವಾಸುಪೂಜಾರಿ ಅವರು ತಮಗೆ ಯಾವುದೇ ಅಂಶವನ್ನೂ ನೀಡದೇ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕೇಲವು ದಿನಗಳ ಹಿಂದೆ ಪತಿ ಗಂಡ ವಾಸು ಪೂಜಾರಿ ಮತ್ತು ಮಹಾಬಲ ಪೂಜಾರಿ ಸೇರಿ ನನ್ನ ಕಿರಿಯ ಸೊಸೆಯಾದ ಸುಮಿತ್ರ ಮತ್ತು ಆಕೆಯ ಮಗನಾದ ವಿಜಯ ಕುಮಾರ್ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದರು.
ಇದಕ್ಕೆ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಗೆ ಹಲ್ಲೆ ಮಾಡಿ, ಕೊಲೆ ಬೆದರಿಯನ್ನೂ ಒಡ್ಡಿದ್ದರು ಎಂದು ಸುಶೀಲಮ್ಮ ಆರೋಪಿಸಿದ್ದಾರೆ.
ಕ್ರಮ ಕೈಗೊಂಡಿಲ್ಲ: ಈ ಸಂಬಂಧ ಪತಿ ವಾಸುಪೂಜಿ, ಮಹಾಬಲ ಪೂಜಾರಿ ಮತ್ತು ಅವರ ಮಗ ಸುಧ ಇವರಿಂದ ಅಪಾಯ ವಿದೆ ಎಂದು ಜಯಪುರ ಪೊಲೀಸ್ ಠಾಣೆಯಲ್ಲಿ, ಡಿವೈಎಸ್‌ಪಿ ಕಚೇರಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ದೂರು ನೀಡಿದ್ದರೂ ಇದುವರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ, ದೂರಿಗೆ ಕಿಮ್ಮತ್ತಿನ ಬೆಲೆಯನ್ನೂ ನೀಡಿಲ್ಲ ಎಂದು ಆರೋಪಿಸಿದರು.