ತಡೆಗೋಡೆಯೇ ಇಲ್ಲದ ಸೇತುವೆ
ಕ.ಪ್ರ.ವಾರ್ತೆ, ತರೀಕೆರೆ, ಜೂ.12 ಸಮೀಪದ ಬೇಲೇನಹಳ್ಳಿ ಬಳಿ ರಾ.ಹೆ.ಯಲ್ಲಿನ ಕೆರೆಯ ದೊಡ್ಡ ಸೇತುವೆಯ ತಡೆಗೋಡೆ ಮುರಿದು ಹೋಗಿದ್ದು, ವಾಹನಗಳ ನೇರ ಅಪಘಾತಕ್ಕೆ ಆಹ್ವಾನ ಕೊಟ್ಟಂತಾಗಿದೆ.
ರಾ.ಹೆ.ಆದ್ದುದರಿಂದ ದಿನದ 24 ಗಂಟೆಯೂ ಭಾರೀ ಸರಕು ತುಂಬಿದ ವಾಹನ, ಪ್ರಯಾಣಿಕರ ವಾಹನ, ಟ್ರ್ಯಾಕ್ಟರ್ ಮೋಟಾರ್ ಬೈಕುಗಳು ಹೀಗೆ ದಟ್ಟ ವಾಹನ ಸಂಚಾರದಿಂದ ಕೂಡಿರುತ್ತದೆ. ರಸ್ತೆ ಅಷ್ಟೇನು ವಿಶಾಲವಾಗಿಲ್ಲದಿರುವುದರಿಂದ, ಸಂಚರಿಸುವ ವಾಹನ ಬಿದ್ದು ಹೋಗಿರುವ ಸೇತುವೆಯ ತಡೆಗೋಡೆ ಸನಿಹವೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಸೇತುವೆ ಕೆಳಗಡೆ ಸುಮಾರು 40 ಅಡಿ ಅಳದಲ್ಲಿ ದೊಡ್ಡ ಕೆರೆಯೂ ಇದೆ. ಸೇತುವೆ ತಡೆಗೋಡೆ ಇಲ್ಲದಿರುವುದು ತಕ್ಷಣ ಸಂಚರಿಸುವ ವಾಹನ ಚಾಲಕರ ಗಮನಕ್ಕೆ ಬರುವುದಿಲ್ಲ. ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕೂಡಲೇ ಸಂಬಂಧಿಸಿದ ಇಲಾಖೆ ಸೇತುವೆ ತಡೆಗೋಡೆ ನಿರ್ಮಿಸಿ ವಾಹನಗಳ ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆ ಕಡೆಗೆ ಗಮನ ಹರಿಸಬೇಕಾಗಿರುವುದು ಅತೀ ಅವಶ್ಯಕ.