ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.12
ಸಮಾಜದ ಕೆಳಸ್ಥರದಲ್ಲಿರುವ ಮೊಗವೀರ ಸಮುದಾಯ ಮುಖ್ಯವಾಹಿನಿಯಲ್ಲಿ ಬೆರೆಯಬೇಕಾದರೆ ಆ ಜನಾಂಗದ ಮಕ್ಕಳು ಶಿಕ್ಷಣವಂತಾಗಬೇಕು ಎಂದು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಶ್ರೀ ಕೋಟ್ಯಾನ್ ಹೇಳಿದ್ದಾರೆ.
ಜಿಲ್ಲಾ ಮೊಗವೀರ ಮಹಾಜನ ಸಂಘ ನಗರದ ಸವೂರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲಾದ ವಿದ್ಯಾರ್ಥಿ ವೇತನ ಮತ್ತು ಉಚಿತ ನೋಟ್ಪುಸ್ತಕಗಳನ್ನು ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾವಂತರಾಗಿ: ಬಡತನದ ವಿರುದ್ಧ ಹೋರಾಡಲು ಶಿಕ್ಷಣವೊಂದು ಪ್ರಮುಖವಾದ ಅಸ್ತ್ರ. ವಿದ್ಯಾವಂತರಾದಾಗ ಮಾತ್ರ ಸಮಾಜದಲ್ಲಿ ಗೌರವ, ಅಂತಸ್ತು ಲಭಿಸುತ್ತವೆ ಎಂದ ಅವರು, ಸಮಾಜದ ಕೆಳಸ್ಥರದಲ್ಲಿ ಬಡತನದಲ್ಲಿ ಬದುಕುತ್ತಿರುವ ಸಮುದಾಯಗಳ ಜನ ಇದನ್ನು ಅರ್ಥಮಾಡಿಕೊಂಡು ತಮಗೆ ಎಷ್ಟೇ ಕಷ್ಟವಾದರೂ ಬಿಡದೇ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕಿವಿಮಾತು ಅವರು ಹೇಳಿದರು.
ಬಡ ಮಕ್ಕಳಿಗೆ ಪ್ರೋತ್ಸಾಹ: ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದುವರೆಗೆ ನೂರಾರು ರಕ್ತದಾನ ಶಿಬಿರಗಳನ್ನು ನಡೆಸಿದೆ. ಬಡ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದೆ. 75 ಸಾವಿರ ಬಡವರಿಗೆ ಹೆಲ್ತ್ ಕಾರ್ಡ್ಗಳನ್ನು ನೀಡಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ವೇತನ ವಿತರಣೆ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಡಿ.ಎಲ್. ಶಂಕರ್ನಾಥ್, ತಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ನೋಟ್ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಡಾ. ಜಿ. ಶಂಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೊಗವೀರ ಮಹಾಜನ ಸಂಘದ ಜಿಲ್ಲಾಧ್ಯಕ್ಷ ಕೆ. ರಾಮಣ್ಣ, ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ದೊರೆಯುವ ಸಹಾಯ ಮತ್ತು ಸವಲತ್ತುಗಳನ್ನು ಸಮುದಾಯದ ಬಡ ಮಕ್ಕಳು ಸದ್ಭಳಕೆ ಮಾಡಿಕೊಂಡು ಶ್ರಮ ವಹಿಸಿ ಓದುವ ಮೂಲಕ ವಿದ್ಯಾವಂತರಾಗಬೇಕು ಎಂದು ಅವರು ಮನವಿ ಮಾಡಿದರು.
ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಗಳಿಸಿದ ಸಮುದಾಯದ ವಿದ್ಯಾರ್ಥಿನಿ ಬಿ.ಟಿ. ಚೈತಾಲಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು. ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆಯ ಉಪಾಧ್ಯಕ್ಷ ದೀಪಕ್ ರಾಜ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಸದಸ್ಯ ಚಂದ್ರೇಶ್ ಪಿತ್ರಾಡಿ, ಜಿಲ್ಲಾ ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಬಿ. ನಾರಾಯಣ್ ಉಪಸ್ಥಿತರಿದ್ದರು.