ಒಂದು ಗಂಟೆ ಕಾಲ ಮಣ್ಣಿನಲ್ಲಿ ಹೂತು ಹೋಗಿದ್ದರೂ ಬದುಕುಳಿದ ಕಾರ್ಮಿಕ!
ಚಿಕ್ಕಮಗಳೂರು: ಒಳಚರಂಡಿ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನೊಬ್ಬ ಸುಮಾರು 15 ಅಡಿ ಆಳದ ಚರಂಡಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಿಲುಕಿದ್ದರೂ ಬದುಕುಳಿದಿದ್ದಾನೆ.
ನಗರದ ಒಳಚರಂಡಿ ಕಾಮಗಾರಿಯ ಗುತ್ತಿಗೆಯನ್ನು ಆಂಧ್ರದವರು ಪಡೆದುಕೊಂಡಿದ್ದು, ಹೈದರಾಬಾದ್ನಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದೆ. ಕೆಂಪನಹಳ್ಳಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಜೆಸಿಬಿಯಿಂದ ಸುಮಾರು 15 ಅಡಿ ಆಳಕ್ಕೆ ಚರಂಡಿ ತೋಡಿ ಪೈಪ್ಗಳನ್ನು ಜೋಡಣೆ ಮಾಡಲಾಗುತ್ತಿದೆ. ಗುರುವಾರ ಸಂಜೆ ಸುಮಾರು 3.30ರ ವೇಳೆಗೆ ಚರಂಡಿಯಲ್ಲಿ ನರಸಿಂಹ (45) ಎಂಬಾತ ಇಳಿದು ಪೈಪ್ ಜೋಡಣೆ ಮಾಡುತ್ತಿದ್ದ. ನಿರಂತರವಾಗಿ ತುಂತುರು ಮಳೆಯಾಗುತ್ತಿರುವುದರಿಂದ ಚರಂಡಿಯ ಮಣ್ಣು ಆತನ ಮೇಲೆ ಬಿದ್ದಿದೆ. ಮಣ್ಣಿನಲ್ಲಿ ಆತ ಪೂರ್ಣ ಪ್ರಮಾಣದಲ್ಲಿ ಮುಚ್ಚಿ ಹೋಗಿದ್ದು ಆತನ ಕೈ ಮಾತ್ರ ಹೊರ ಭಾಗದಲ್ಲಿ ಕಾಣುತ್ತಿತ್ತು.
ಸಮೀಪದಲ್ಲೇ ಜೆಸಿಬಿ ಯಂತ್ರ ಇದ್ದಿದ್ದರಿಂದ ಮಣ್ಣನ್ನು ಹೊರಗೆ ತೆಗೆಯಲಾಯಿತು. ಈ ಕಾರ್ಯಾಚರಣೆ ತೀವ್ರಗೊಳಿಸಲು ಮತ್ತೊಂದು ಜೆಸಿಬಿ ಯಂತ್ರವನ್ನು ತೆಗೆದುಕೊಂಡು ಬರಲಾಯಿತು. ಇದರ ಜತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಅಗ್ನಿಶಾಮಕದಳ, ಪೊಲೀಸರು ಮತ್ತು ಸಾರ್ವಜನಿಕರು ಸತತವಾಗಿ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ನರಸಿಂಹನನ್ನು ಸುರಕ್ಷಿತವಾಗಿ ಹೊರಗೆ ತೆಗೆದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಸವನಹಳ್ಳಿ ಪೊಲೀಸರು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.