ಕೆಂಚಾಂಬ ದೇವಿ ಸಿಡಿ ಮಹೋತ್ಸವ
ಕಡೂರು: ಪಟ್ಟಣದ ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ದೇವತೆ ಶ್ರೀ ಕೆಂಚಾಂಬ ದೇವಿಯವರ ಸಿಡಿಸೇವೆ ಮಹೋತ್ಸವ ಕಾರ್ಯವು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಪಟ್ಟಣದಲ್ಲಿ ಮಕ್ಕಳನ್ನು ಸಿಡಿ ಆಡಿಸುವ ಹರಕೆ ಹೊತ್ತಿದ್ದ ಮಕ್ಕಳನ್ನು ಸಿಡಿ ಸ್ಥಳಕ್ಕೆ ಕರೆದೊಯ್ಯಲು ಶ್ರೀ ವೀರಭದ್ರಸ್ವಾಮಿ, ಶ್ರೀ ಕೆಂಚಾಂಬದೇವಿ, ಶ್ರೀ ಭದ್ರಕಾಳಮ್ಮ, ಶ್ರೀ ಸ್ವರ್ಣಾಂಬ ದೇವಿ, ಶ್ರೀ ಚೌಡ್ಲಾಪುರದಮ್ಮ, ಶ್ರೀ ಬನಶಂಕರಿ ಅಮ್ಮನವರೊಂದಿಗೆ ಪಟ್ಟಣದಾದ್ಯಂತ ಮೆರವಣಿಗೆಯ ಉತ್ಸವ ನಡೆಸಲಾಯಿತು.
ನಂತರ ಪಟ್ಟಣದ ದೊಡ್ಡಪೇಟೆ, ಹಳೇಪೇಟೆ, ಸುಭಾಷ್ನಗರ ಸೇರಿದಂತೆ ಎಲ್ಲೆಡೆ ಮೆರವಣಿಗೆ ನಡೆಸುವ ಮೂಲಕ ಶ್ರೀಕೆಂಚಾಂಬ ದೇವಿಯವರು ಇತರೆ ದೇವರೊಂದಿಗೆ ಸಿಡಿಕೊಂಡಿ ಮತ್ತು ಕಳಸದೊಂದಿಗೆ ಸಿಡಿ ಆಡಲಿರುವ ಮಕ್ಕಳು ಮತ್ತು ಕಳಸಗಳನ್ನು ಮೆರವಣಿಗೆಯಲ್ಲಿ ಹೊತ್ತೊಯ್ದು ಪಟ್ಟಣದ ಛತ್ರದ ಬೀದಿಯಲ್ಲಿರುವ ದೇವಾಲಯದ ಬಳಿ ಕರೆ ತರಲಾಯಿತು.
ಸಿಡಿ ಮಹೋತ್ಸವಕ್ಕೆ ಶ್ರೀ ಕೆಂಚಾಂಬ ದೇವಿಯವರಿಗೆ ಮೊದಲು ಸಿಡಿಕೊಂಡಿ ಹಾಕುವ ಮೂಲಕ ಶ್ರೀದೇವಿಯವರಿಂದ ಸಿಡಿ ಕಾರ್ಯಕ್ಕೆ ಚಾಲನೆ ನೀಡಿದ ಕೂಡಲೇ ಹರಕೆ ಹೊತ್ತಿದ್ದ ಹಲವಾರು ಮಕ್ಕಳನ್ನು ಪೋಷಕರು ಸಿಡಿ ಆಡಿಸಿ ದೇವಿಯ ಹರಕೆ ತೀರಿಸಿದರು. ಪ್ರತೀ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರಸ್ವಾಮಿಯವರ ಜಾತ್ರಾ ಮಹೋತ್ಸವವು ಸಿಡಿ ಕಾರ್ಯಕ್ರಮ, ಓಕುಳಿ ಮತ್ತು ಸಂಜೆ ಪಟ್ಟಣದಲ್ಲಿ ಹೆಣ್ಣು ದೇವರಿಗೆ ಅರಿಶಿಣ ಕುಂಕುಮ, ಬಳೆ, ಮಡಿಲಕ್ಕಿ ನೀಡುವ ಮೂಲಕ ಮಡಿಲಕ್ಕಿ ಸೇವೆ ನಡೆದು ದೇವರುಗಳಿಗೆ ಬೀಳ್ಕೊಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಇದೇ ಸಂದರ್ಭದಲ್ಲಿ ಹನ್ನೆರಡು ಹರಿವಾಣದ ಗೌಡರು ಮತ್ತು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ, ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನರಲ್ ತಿಮ್ಮಯ್ಯ, ಪುರಸಭಾ ಸದಸ್ಯರಾದ ಕೋಳಿ ಲೋಕೇಶ್, ತೋಟದಮನೆ ಮೋಹನ್, ಗೋವಿಂದಪ್ಪ, ಮಂಜುನಾಥ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.