ಪಂಚಾಯತ್ ರಾಜ್ ತಿದ್ದುಪಡಿ: ಖಂಡನೆ
ಚಿಕ್ಕಮಗಳೂರು: ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ವಿಫಲರಾಗುವ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಅನರ್ಹಗೊಳಿಸುವ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕರಿಸಿರುವುದಕ್ಕೆ ಜಿಲ್ಲಾ ಪಂಚಾಯ್ತಿ ಖಂಡನಾ ನಿರ್ಣಯ ಕೈಗೊಂಡಿದೆ. ಜಿಪಂ ಸಭಾಂಗಣದಲ್ಲಿ ಗುರುವಾರದಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಈ ನಿರ್ಣಯವನ್ನು ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಯಿತು. ಈ ವಿಷಯವನ್ನು ಶೃಂಗೇರಿ ಶಿವಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿ, ಒಂದು ರುಪಾಯಿಗೆ ಕೆಜಿ ಅಕ್ಕಿ, ಅಗ್ಗದ ದರದಲ್ಲಿ ಮದ್ಯ ವಿತರಣೆ ಸರಿ. ಆದರೆ, ಗ್ರಾಮ ಸಭೆ ಮತ್ತು ವಾರ್ಡ್ ಸಭೆ ಕಡ್ಡಾಯಗೊಳಿಸಿ, ಅದರ ಹೊಣೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮತ್ತು ಸದಸ್ಯರ ಮೇಲೆ ಹೊರೆಸಿರುವುದು ಏಕೆ ಎಂದು ಪ್ರಶ್ನೆ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ಕಡೂರು ಶಾಸಕ ವೈಎಸ್ವಿ ದತ್ತ, ಇದು, ವಿಧಾನಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಇದರ ಬಗ್ಗೆ ಇಲ್ಲಿ ಚರ್ಚೆ ಮಾಡುವುದು ಅಪ್ರಸ್ತುತ ಎಂದರು. ಗ್ರಾಮ ಪಂಚಾಯ್ತಿ ಸದಸ್ಯರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಸರಿಯಲ್ಲ ಎಂದು ರೇಖಾ ಹುಲಿಯಪ್ಪಗೌಡ ಹೇಳಿದರು. ಇದಕ್ಕೆ ಪಕ್ಷ ಬೇದ ಮರೆತು ಇತರೆ ಸದಸ್ಯರು ಬೆಂಬಲಿಸಿದರು.