'ಪ್ರತಿಭಾವಂತರನ್ನು ಗುರುತಿಸಿ, ಗೌರವಿಸಿ'
ಚಿಕ್ಕಮಗಳೂರು: ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ನಗರಸಭಾ ಸದಸ್ಯೆ ಯಶೋಧ ಸಲಹೆ ಮಾಡಿದ್ದಾರೆ.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಗರದ ವಿಜಯಪುರ ಬಡಾವಣೆಯ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿಭಾವಂತರ ಸಂಖ್ಯೆ ಬಹಳಷ್ಟಿದೆ. ಆದರೆ, ಅವರನ್ನು ಗುರುತಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವವರಿಲ್ಲದೇ ಬಹಳಷ್ಟು ಪ್ರತಿಭೆಗಳು ಬೆಳಕಿಗೆ ಬಾರದೇ ಮೂಲೆ ಗುಂಪಾಗುತ್ತಿವೆ ಎಂದು ವಿಷಾದವ್ಯಕ್ತಪಡಿಸಿದರು.
ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಗೌರವಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವಾದರೆ ಸಮಾಜದಲ್ಲಿ ಅಂತಹವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಬೆಳೆಸುವ ಕೆಲಸವನ್ನು ಸಂಘ- ಸಂಸ್ಥೆಗಳು ಮಾಡಬೇಕು ಎಂದು ಹೇಳಿದರು.
ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕ ಪಡೆಯುವುದರ ಜೊತೆಗೆ ಸಿ.ಇ.ಟಿ ಪರೀಕ್ಷೆಯಲ್ಲಿ 216ನೇ ರ್ಯಾಂಕ್ ಗಳಿಸಿರುವ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಎನ್. ಲಾವಣ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಲವರು ಇದ್ದರು.