ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ: ಅಸಮರ್ಪಕ ವಿದ್ಯುತ್
ಮೂಡಿಗೆರೆ: ಮೆಸ್ಕಾಂ ಕಿರಿಯ ಎಂಜಿನಿಯರ್ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕಿರುಗುಂದ ಗ್ರಾಪಂ ವ್ಯಾಪ್ತಿಗೆ ಸೇರಿದ ಏಳು ಹಳ್ಳಿಗಳ ಜನರು ಹತ್ತು ದಿನಗಳಿಂದ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಕಿರುಗುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಆರ್. ನಝೀರ್ ಆರೋಪಿಸಿ ಮೆಸ್ಕಾಂ ಕಿರಿಯ ಅಭಿಯಂತರರಿಗೆ ಗುರುವಾರ ದೂರು ನೀಡಿದ್ದಾರೆ.
ಗೋಣಿಬೀಡು ವ್ಯಾಪ್ತಿಯೊಳಗೆ ವಾಸವಿರಬೇಕಿರುವ ಎಂಜಿನಿಯರ್ ಕರಿಯಪ್ಪ ಮೂಡಿಗೆರೆಯಲ್ಲಿ ವಾಸವಿದ್ದು, ಲೈನ್‌ಮ್ಯಾನ್ ಜನ್ನಾಪುರದಲ್ಲಿದ್ದರೆ, ವಿದ್ಯುತ್ ಮೇಸ್ತ್ರಿ ನಾಗರಾಜು ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಮೂವರು ಸರಿಯಾದ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಹಗಲು ರಾತ್ರಿ ಎನ್ನದೇ ವಿದ್ಯುತ್ ಆಗಾಗ ಕಣ್ಣಮುಚ್ಚಾಲೆ ಆಡುತ್ತಿದೆ. ಎಂಜಿನಿಯರ್ ಮತ್ತು ಸಿಬ್ಬಂದಿಗಳಿಗೆ ಸಮಸ್ಯೆ ಕುರಿತು ಹೇಳಿದರೆ ಉಡಾಪೆಯ ಉತ್ತರ ನೀಡಿ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತಂದಾಗ ಲಿಖಿತ ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರಿಂದ ಅವರಿಗೆ ದೂರು ನೀಡಲಾಗಿದೆ.
ಮುಂದಿನ ಒಂದು ವಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಎಂಜಿನಿಯರ್ ಮತ್ತು ಸಿಬ್ಬಂದಿಗಳನ್ನು ವರ್ಗಾಹಿಸಿ ಸಮರ್ಪಕ ವಿದ್ಯುತ್ ಸೌಕರ್ಯ ಒದಗಿಸದಿದ್ದರೆ ಗ್ರಾಮದ ವಿದ್ಯುತ್ ಗ್ರಾಹಕರು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.