ಮೋದಿ ಪ್ರಧಾನಿಯಾದರೆ ಗುಜರಾತ್ ಮಾದರಿ ದೇಶದ ಅಭಿವೃದ್ಧಿ: ಮೋಹನ್
ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿ ಆಯ್ಕೆಯಾಗಿರುವುದು ಸಂತಸದ ವಿಷಯ. ಅವರು ಇನ್ನೂ ದೇಶದ ಪ್ರಧಾನಿಯಾದರೆ ಗುಜರಾತ್ ಅಭಿವೃದ್ಧಿಯನ್ನು ಸಾಧಿಸಿದಂತೆ ಭಾರತವು ಸಹ ಅಭಿವೃದ್ಧಿ ರಾಷ್ಟ್ರವಾಗುತ್ತದೆ ಎಂದು ಸಂಸದ ಪಿ.ಸಿ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಪಿ.ಸಿ. ಮೋಹನ್, ಪ್ರಚಾರ ಸಮಿತಿ ಅಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಇದೀಗ ಎಲ್ಲಾ ಬಗೆಹರಿದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಗುಜರಾತ್ ಮಾದರಿಯಲ್ಲಿ ರಾಷ್ಟ್ರ ಅಭಿವೃದ್ಧಿ ಸಾಧಿಸುವಂತೆ ಮಾಡಲಿದ್ದಾರೆ ಎಂದರು.
ತದ ನಂತರ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಪಸಾದರೆ ಎಲ್ಲರೂ ಸ್ವಾಗತಿಸುತ್ತಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಲಿದ್ದು ಪಕ್ಷದ ಸಂಘಟನೆಗೆ ಶ್ರಮಿಸಲಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.