ಕತ್ರಿ ಮಾರಮ್ಮ ಸಿಡಿ ಮಹೋತ್ಸವ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.14
ನಗರದ ಶ್ರೀ ಕತ್ರಿ ಮಾರಮ್ಮನವರ ದೇವಾಲಯದಲ್ಲಿ ಸಿಡಿ ಮಹೋತ್ಸವ ಶುಕ್ರವಾರ ನಡೆಯಿತು.
ಸಂಜೆ 7 ಗಂಟೆಯ ಸಮಯದಲ್ಲಿ ನಗರದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಎತ್ತಿನಗಾಡಿಗಳನ್ನು ಓಡಿಸುತ್ತಿದ್ದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದಾಗ ಪೊಲೀಸರು ಲಾಠಿ ಬೀಸಿದರು.
ಪ್ರತಿ ವರ್ಷದಂತೆ ಈ ಬಾರಿ ನಗರದ ಕೆ.ಎಂ. ರಸ್ತೆಯಲ್ಲಿರುವ ಕತ್ರಿ ಮಾರಮ್ಮ ದೇವಾಲಯದಲ್ಲಿ ಸಿಡಿ ಮಹೋತ್ಸವ ನಡೆಯಿತು. ಈ ಉತ್ಸವದಲ್ಲಿ ಪಾಲ್ಗೊಳ್ಳಲು ನಗರದ ವಿವಿಧ ಬಡಾವಣೆ ಹಾಗೂ ಆಸುಪಾಸಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಹೆಚ್ಚಿನ ಬಂದೋಬಸ್ತ್ಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಸಿಡಿ ಉತ್ಸವದ ಸಂದರ್ಭದಲ್ಲಿ ಕೆಲವರು ವೇಗದಲ್ಲಿ ಎತ್ತಿನಗಾಡಿಗಳನ್ನು ಓಡಿಸುತ್ತಿದ್ದರು.
ಇದರಿಂದ ಅವಘಡ ಸಂಭವಿಸಬಹುದೆಂದು ಅರಿತ ಪೊಲೀಸರು ಅವರನ್ನು ತಡೆಯುವ ಕೆಲಸಕ್ಕೆ ಮುಂದಾದ ವೇಳೆಯಲ್ಲಿ ಯುವಕರ ಗುಂಪೊಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿತು.
ಇದರಿಂದಾಗಿ ಪೊಲೀಸರು ಲಾಠಿ ಬೀಸಿ ಗುಂಪುಗಳನ್ನು ಚದುರಿಸಿದರು.