ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಫಿ ತೋಟಗಳ ತೆರವು: ಕ್ರಮಕ್ಕೆ ಆಗ್ರಹ

Lingaraj Badiger
Updated On : 15 Jun 2013, 10:43 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.14
ಸುಪ್ರೀಂ ಕೋರ್ಟ್ ನಿರ್ದೇಶನ ಧಿಕ್ಕರಿಸಿ ಏಕಾಏಕಿ ಕಾಫಿ ತೋಟಗಳನ್ನು ತೆರವುಗೊಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಅಧ್ಯಕ್ಷ ಡಾ.ಎನ್. ಪ್ರದೀಪ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಒತ್ತುವರಿ ತೆರವುಗೊಳಿಸಿದ ತಾಲೂಕಿನ ಚಿಕ್ಕೊಳಲೆ ಗ್ರಾಮಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ  ಪದಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಮಾತನಾಡಿ, 1978 ಕ್ಕಿಂತ ಹಿಂದೆ ಅರಣ್ಯವನ್ನು ಒತ್ತುವರಿ ಮಾಡಿರುವವರಿಗೆ ಪುನರ್ವಸತಿ ಕಲ್ಪಿಸಿ ನಂತರ ಅವರನ್ನು ತೆರವುಗೊಳಿಸಬೇಕು ಎಂದು  ಸುಪ್ರೀಂ ಕೋರ್ಟ್ ನಿರ್ದೇಶನವಿದೆ.
ತೋಟ ನಾಶ ಮಾಡಬಾರದು: ಇದರ ಜೊತೆಗೆ ಒತ್ತುವರಿ ತೆರವುಗೊಳಿಸುವ ಸಂದರ್ಭ ಬಂದಲ್ಲಿ ಆ ಜಾಗಕ್ಕೆ ಗಡಿ ಗುರುತಿಸುವ, ಕಂಧಕವನ್ನು ನಿರ್ಮಾಣ ಮಾಡಲು ಮಾತ್ರ ಅವಕಾಶ ನೀಡಿದೆಯೇ ಹೊರತು ತೋಟವನ್ನು ನಾಶಪಡಿಸಲು ತಿಳಿಸಿಲ್ಲ ಎಂದು ಹೇಳಿದರು.
ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಚಿಕ್ಕೊಳಲೆಯ ಕೆ.ಸಿ. ನಾರಾಯಣಗೌಡ ಅವರ ಒತ್ತುವರಿಯನ್ನು ತೆರವುಗೊಳಿಸುವ ನೆಪದಲ್ಲಿ ಅವರ 27 ಎಕರೆ ತೋಟದಲ್ಲಿ ಬೆಳೆದು ನಿಂತಿದ್ದ ಕಾಫಿ ಗಿಡಗಳನ್ನು ಕಡಿದು ಸಂಪೂರ್ಣ ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.
ಅಧಿಕಾರಿಗಳು ತಪ್ಪೆಸಗಿದ್ದಾರೆ: ಮಲೆನಾಡು ಭಾಗದಲ್ಲಿ ತಲಾ ತಲಾಂತರದಿಂದ ಕೃಷಿಕರು ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಭೂಮಿಯನ್ನು ಗುರುತು ಮಾಡುವಲ್ಲಿ ಅಧಿಕಾರಿಗಳು ತಪ್ಪೆಸಗಿದ್ದಾರೆ. ಸರ್ಕಾರವೂ ಈವರೆಗೂ ಕಂದಾಯ ಮತ್ತು ಅರಣ್ಯ ಭೂಮಿಯನ್ನು ಸರಿಯಾಗಿ ಗುರುತಿಸಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿಯನ್ನು ಗುರುತು ಮಾಡುವ ಮೊದಲೇ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿರುವುದು ಆ ನೆಪದಲ್ಲಿ ಕಾಫಿ ತೋಟಗಳನ್ನು ನಾಶ ಮಾಡುತ್ತಿರುವುದು ಅಮಾನವೀಯ ಕೃತ್ಯ ಎಂದು ಹೇಳಿದರು.
ಮರು ಪರಿಶೀಲಿಸಿ: ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ಇದೇ ರೀತಿ ಮುಂದುವರೆದರೆ ಮಲೆನಾಡಿನಲ್ಲಿ ಕೃಷಿಯೇ ಉಳಿಯುವುದಿಲ್ಲ. ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ ಅವರು, ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ಆದೇಶವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬೇಕು. ಪುನರ್ವಸತಿ ಕಲ್ಪಿಸದೇ ಕಾಫಿ ತೋಟಗಳನ್ನು ನಾಶಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತೋಟ ಕಳೆದುಕೊಂಡಿರುವ ಬೆಳೆಗಾರರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಡಿ.ಎಂ. ವಿಜಯ್ ಮಾತನಾಡಿ, ಒತ್ತುವರಿ ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದರೆ ಅದನ್ನು ತಕ್ಷಣ ಕಾಫಿ ಬೆಳೆಗಾರರು ಒಕ್ಕೂಟದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಕೆಜಿಎಫ್ ಪದಾಧಿಕಾರಿಗಳ ತಂಡಕ್ಕೆ ತೋಟ ನಾಶವಾಗಿರುವುದನ್ನು ವಿವರಿಸಿದ ಬೆಳೆಗಾರ ಕೆ.ಸಿ. ನಾರಾಯಣಗೌಡ ಕೇವಲ ಒಂದು ವಾರದ ಮುಂಚೆ ನೋಟಿಸ್ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದಕ್ಕೂ ಅವಕಾಶ ನೀಡದೇ 43 ವರ್ಷಗಳಿಂದ ಕೃಷಿ ಮಾಡುತ್ತಿದ್ದ ತಮ್ಮ ತೋಟದ ಕಾಫಿ ಗಿಡಗಳನ್ನು ಏಕಾಏಕಿ ಸಂಪೂರ್ಣ ಕಡಿದು ನಾಶಗೊಳಿಸಿದ್ದಾರೆ ಎಂದು ದೂರಿದರು.
ಸಾಲ ಮಾಡಿ ಬೆಳೆಸಿದ್ದ 27 ಎಕರೆ ತೋಟ ನಾಶವಾಗಿದ್ದು ತಮ್ಮ ಬದುಕಿಗೆ ಕೇವಲ 2 ಎಕರೆ ಮಾತ್ರ ಉಳಿದಿದೆ ಎಂದು ಅಳಲು ತೋಡಿಕೊಂಡರು. ಕೆಜಿಎಫ್ ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ತೀರ್ಥಮಲ್ಲೇಶ್, ಬಾಲಕೃಷ್ಣ, ವಿಶ್ವನಾಥ್ ನಾಯಕ್, ರೇವಣ್ಣಗೌಡ ತಂಡದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement