ಕೊಟ್ಟಿಗೆ ಗೊಬ್ಬರ ಬಳಕೆ ಸೂಕ್ತ
ಕ.ಪ್ರ.ವಾರ್ತೆ, ನ.ರಾ.ಪುರ, ಜೂ.14
ರೈತರು ಅತಿಯಾದ ರಾಸಾಯನಿಕ ಗೊಬ್ಬರ ಬಳಸದೆ ತಮ್ಮ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರವನ್ನು ಬಳಸುವಂತೆ ಜಿಪಂ ಸದಸ್ಯೆ ಸುಜಾತ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯು ಭೂ ಚೇತನ ಮತ್ತು ಆತ್ಮ ಯೋಜನೆಯಡಿ ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರ ನೆರವಿಗೆ ಬರಲಿ: ರೈತರು ಈ ದೇಶದ ಬೆನ್ನೆಲುಬಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕಾಗಿದೆ. ಆದರೆ, ಬೆಳೆಯು ಮಾರುಕಟ್ಟೆಗೆ ಬರುವಾಗ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಕ್ಕುತ್ತಾರೆ. ಸರ್ಕಾರವು ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಸಾಲದ ಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ. ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ ಎಂದು ರೈತರು ಮನಗಾಣಬೇಕಾಗಿದೆ. ಕೂಲಿ ಕಾರ್ಮಿಕರ ಸಮಸ್ಯೆ, ಹವಾಮಾನ ವೈಪರೀತ್ಯ, ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಿರುವುದು ರೈತರ ಕಷ್ಟಗಳಿಗೆ ಕಾರಣವಾಗಿದೆ. ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ರೈತರು ವೈಜ್ಞಾನಿಕವಾಗಿ ಕೃಷಿ ಮಾಡುವಂತೆ ಸಲಹೆ ನೀಡಿದರು.
ಇಳುವರಿ ಕುಸಿತ: ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ. ಲೋಕೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 60ರ ದಶಕದಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಯಾಯಿತು. ಆಹಾರ ಉತ್ಪಾದನೆ ಜಾಸ್ತಿಯಾದರೂ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿ ಬರುಡಾಯಿತು. ಇಳುವರಿ ಗಣನೀಯವಾಗಿ ಕುಸಿಯಿತು. ರೈತರ ಆತ್ಮಹತ್ಯೆ ಜಾಸ್ತಿಯಾಯಿತು. ಇದನ್ನು ಮನಗಂಡ ಸರ್ಕಾರವು 2000ನೇ ಇಸವಿಯಲ್ಲಿ ಆತ್ಮ ಯೋಜನೆ ಹಾಗೂ 2009-10 ರಲ್ಲಿ ಭೂ ಚೇತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಕಾರ್ಯಕ್ರಮದಡಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ರೈತರಿಗೆ ತರಬೇತಿ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ರಸಗೊಬ್ಬರ ಬಳಕೆ ಬಗ್ಗೆ ಶೃಂಗೇರಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ನಿರಂಜನ್, ಸಸ್ಯ ಸಂರಕ್ಷಣೆ ಬಗ್ಗೆ ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಉಮಾಶಂಕರ್, ಭೂ ಚೇತನದ ಬಗ್ಗೆ ನರಸಿಂಹರಾಜಪುರ ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ. ಲೋಕೇಶಪ್ಪ, ಆತ್ಮ ಯೋಜನೆ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಆತ್ಮ ಯೋಜನಾ ನಿರ್ದೇಶಕ ಬಸವರಾಜ್ ಮಾಹಿತಿ ನೀಡಿದರು.
ಚೆಕ್ ವಿತರಣೆ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಭಾಸ್ಕರ್ ಎಂಬುವರ ಕುಟುಂಬಕ್ಕೆ 1 ಲಕ್ಷ ಚೆಕ್ ಹಾಗೂ ಹುಲ್ಲು ಮತ್ತು ಬತ್ತದ ಗೊಣಬೆ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸಿದ ರೈತರಾದ ರಂಗನಾಥ್, ಅಬ್ದುಲ್ ಈಸು, ಅಬ್ದುಲ್ ಹಾಸನ್, ಗೋಪಾಲ ಪೂಜಾರಿ, ರಾಮಪ್ಪ ಎಂಬ ರೈತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು.