ವಿದ್ಯುತ್ ಹರಿದು 2 ಹಸುಗಳ ಸಾವು
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಜೂ.14
ಸಮೀಪದ ಹೇರೂರು ಗ್ರಾ.ಪಂ. ವ್ಯಾಪ್ತಿಯ ಎಲೆಮಡಲು ಗ್ರಾಮದ ಹುಗುಳುಮಕ್ಕಿ ಲೋಲಾಕ್ಷಮ್ಮ ನವರ ಮನೆ ಹತ್ತಿರ ಹಾದುಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಮೇವಿನಲ್ಲಿದ್ದ ಒಂದು ಸಿಂದಿ, ಒಂದು ಮಲ್ನಾಡ್ ಗಿಡ್ಡತಳಿ ಹಸುಗಳ ಮೇಲೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕುಂದೂರಿನ ಟಿಸಿಯಿಂದ ಚಿಮ್ಮನಕೊಡಿಗೆಗೆ ಹೋಗುವ ಮಾರ್ಗ ಇದಾಗಿದ್ದು, ತೆಳುವಾದ ತಂತಿ ಜೋಡಣೆಯ ಕಾರಣದಿಂದ ಈ ಘಟನೆ ಸಂಭವಿಸಿದೆ.
ಈ ಭಾಗದ ಸುತ್ತಮುತ್ತ ವಿದ್ಯುತ್ ಮಾರ್ಗ ಅಪಾಯಕರ ಸ್ಥಿತಿಯಲ್ಲಿದ್ದು ಕಳೆದ ಐದು ವರ್ಷದಿಂದ ಮಾರ್ಗ ಸರಿಪಡಿಸುವಂತೆ ಮೆಸ್ಕಾಂಗೆ ಮನವಿ ಮಾಡಿದ್ದರೂ ಭರವಸೆಯೊಂದೇ ಪರಿಹಾರವಾಗಿದ್ದು, ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಪತ್ನಿಗೆ ಕಿರುಕುಳ: ಶಿಕ್ಷೆ
ಚಿಕ್ಕಮಗಳೂರು: ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪಿಗೆ ನಗರದ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಾದಾ ಸಜೆ ಹಾಗೂ ದಂಡ ವಿಧಿಸಿದೆ.
ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಳಾಸಪುರ ಗ್ರಾಮದ ಆರೋಪಿ ಮುರುಗೇಂದ್ರ 15 ವರ್ಷಗಳ ಹಿಂದೆ ಲೋಲಕ್ಷಮ್ಮ ಎಂಬುವರನ್ನು ಮದುವೆಯಾಗಿ ನಂತರದ ದಿನಗಳಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮುರುಗೇಂದ್ರನಿಗೆ ಒಂದು ವರ್ಷ ಸಾದಾ ಸಜೆ ಹಾಗೂ 3 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿ. ರಾಘವೇಂದ್ರ ರಾಯ್ಕರ್ ಮೊಕದ್ದಮೆ ನಡೆಸಿದ್ದರು.