ಪತ್ರಿಕೆಗಳಿಗೂ ನೀತಿ ಸಂಹಿತೆ ಅಗತ್ಯ
ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ. 15
ಪತ್ರಿಕೆಗಳಿಗೂ ನೀತಿ ಸಂಹಿತೆ ಅವಶ್ಯಕತೆ ಇದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಇಲ್ಲಿನ ಮತ್ತಾವರದ ಅರಣ್ಯ ಮಾಹಿತಿ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸ್ವಯಂ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು .
ವಿದ್ಯುನ್ಮಾನ ಮಾಧ್ಯಮ ಬಂದಾಗ ಮುದ್ರಣ ಮಾಧ್ಯಮಕ್ಕೆ ದಕ್ಕೆಯಾಗುತ್ತದೆ ಎಂದುಕೊಂಡಿದ್ದೆವು. ಆದರೆ, ಓದುಗರ ಸಂಖ್ಯೆ ಕಡಿಮೆ ಇಲ್ಲ. ದೃಶ್ಯ ಮಾಧ್ಯಮದಲ್ಲಿ ನೋಡುವುದು ಮರೆತು ಹೋಗುತ್ತದೆ. ಆದರೆ, ಪತ್ರಿಕೆಯಲ್ಲಿ ಓದಿದ್ದು, ನೆನಪಿಸಿಕೊಳ್ಳಲು, ಉಲ್ಲೇಖ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ದ್ವೇಷ ಬಿತ್ತುವ ಕೆಲಸ: ಕೆಲವೊಮ್ಮೆ ದೃಶ್ಯ ಮಾಧ್ಯಮದಲ್ಲಿ ದ್ವೇಷ ಬಿತ್ತುವ ಕೆಲಸ ಆಗುತ್ತದೆ. ಬಿಎಸ್ವೈ ಮತ್ತು ನನ್ನ ಮಧ್ಯೆ ದ್ವೇಷ ಬಿತ್ತಿದ್ದು ಒಂದು ಖಾಸಗಿ ವಾಹಿನಿ ಎಂದ ಅವರು, ನಕರಾತ್ಮಕ ಸುದ್ದಿಗಳು ಬೇಗ ಗಮನ ಸೆಳೆದು, ತಪ್ಪು ಸಂದೇಶವನ್ನು ರವಾನಿಸುತ್ತವೆ. ಚಳವಳಿಗಳು ಇಂದು ಮೀಡಿಯಾ ಛಾಯಾಗ್ರಾಹಕರಿಗೆ ಸೀಮಿತವಾಗಿವೆ. ಪ್ಲೆಕ್ಸ್ ನಾಯಕರು ಸೃಷ್ಟಿಯಾಗುತ್ತಿದ್ದಾರೆ. ಚಳುವಳಿಗಳನ್ನು ತಪಸ್ಸಿನ ರೀತಿಯಲ್ಲಿ ಪರಿಗಣಿಸಬೇಕು. ಈ ಬಗ್ಗೆ ಮಾಧ್ಯಮಗಳು ಚಿಂತಿಸಿ ಇಂತಹ ಕಾರ್ಯಗಳು ಪತ್ರಕರ್ತರಿಗೆ ದಿಕ್ಸೂಚಿಯಾಗಲಿ ಎಂದರು.
ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಸಮಾಜದ ಹಿತ ಮೀರಿ ಹೋಗಬಾರದು. ಸಣ್ಣ ತಪ್ಪುಗಳನ್ನು ಭೂತಗನ್ನಡಿ ಹಿಡಿದು ನೋಡಬಾರದು ಎಂದು ಕಿವಿ ಮಾತು ಹೇಳಿದರು.
ವಿಶೇಷ ಸೌಲಭ್ಯ: ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಹೆಚ್ಚು ಆಗಬೇಕು. ಆಂಧ್ರಪ್ರದೇಶದ ಸರ್ಕಾರ, ಅಲ್ಲಿಯ ಪತ್ರಕರ್ತರಿಗೆ ಕೊಡುತ್ತಿರುವ ವಿಶೇಷ ಸೌಲಭ್ಯಗಳು ನಮ್ಮ ರಾಜ್ಯದ ಪತ್ರಕರ್ತರಿಗೂ ಅನ್ವಯಿಸಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ನಿರಂತರ ಅಧ್ಯಯನ: ಬದಲಾಗುತ್ತಿರುವ ಮಾಧ್ಯಮ ಪರಿಭಾಷೆ ಕುರಿತು ಉಪನ್ಯಾಸ ನೀಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಪತ್ರಿಕೋದ್ಯಮ ಜಗತ್ತಿನ ಜೀವಕೋಟಿಯನ್ನು ಗಾಢವಾಗಿ ಆವರಿಸಿಕೊಂಡಿದೆ. ಪತ್ರಕರ್ತರಿಗೆ ಈ ಹಿನ್ನೆಲೆಯಲ್ಲಿ ನಿರಂತರ ಅಧ್ಯಯನ, ಸಾಹಿತ್ಯದ ನೆಲೆ ಇದ್ದರೆ ಸಹಕಾರಿ. ಮಾತೃ ಭಾಷೆಯ ಜತೆಗೆ ಆಂಗ್ಲ ಭಾಷೆ, ವಾಣಿಜ್ಯ, ಕಲೆ, ಸಂಗೀತ ಇವುಗಳ ಕನಿಷ್ಠ ಜ್ಞಾನ ಇರಬೇಕು. ಪತ್ರಕರ್ತ ಕಾರ್ಯನಿರ್ವಹಣೆಯಲ್ಲಿ ಜಾತ್ಯತೀತ ಮತ್ತು ಸಮಾಜಮುಖಿಯಾಗಿರಬೇಕು ಎಂದು ಹೇಳಿದರು.
ರಾಜ್ಯಮಟ್ಟದ ಕಾರ್ಯಾಗಾರ: ಅಕಾಡೆಮಿಗೆ 30ರ ಸಂಭ್ರಮ. ಈ ಸಂದರ್ಭದಲ್ಲಿ ಈ ಭಾಗದ ಶಾಸಕರು, ಪತ್ರಕರ್ತರು ಸೇರಿದಂತೆ ಇವರ ನೆರವಿನೊಂದಿಗೆ ಬರುವ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ನಡೆಸಿ, ಚಿಕ್ಕಮಗಳೂರು ಜಿಲ್ಲೆಯ ಸಮಸ್ಯೆಗಳಾದ ಪರಿಸರ, ಒತ್ತುವರಿ, ನಕ್ಸಲ್, ವಿಶ್ವಪರಂಪರಿಕ ಪಟ್ಟಿಯ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಕಪಿಮುಷ್ಟಿಯಲ್ಲಿವೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಮೊದಲಿಯಾರ್ ಮಾತನಾಡಿ, ಎಲೆಕ್ಟ್ರಾನಿಕ್ ಮಾಧ್ಯಮಗಳು ಕೆಲವು ರಾಜಕಾರಣಿಗಳ ಕಪಿಮುಷ್ಟಿಯಲ್ಲಿವೆ. ಅವರ ಸ್ವಾರ್ಥಕ್ಕೆ ತಕ್ಕಂತೆ ಸುದ್ದಿಯನ್ನು ಸೃಷ್ಟಿ ಮಾಡುತ್ತಿವೆ. ಆದರೆ, ಮುದ್ರಣ ಮಾಧ್ಯಮ ಅಸ್ತಿಭಾರ ಗಟ್ಟಿಯಾಗಿದೆ. ಬದ್ಧತೆ ಇರುವ ಪತ್ರಕರ್ತರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಟಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಪಟವರ್ಧನ್ ಸ್ವಾಗತಿಸಿ, ಜಯಕುಮಾರ್ ನಿರೂಪಿಸಿದರು. ಉಮೇಶ್ಕುಮಾರ್ ವಂದಿಸಿದರು.