'ಕೆಲಸ ತಡವಾದಲ್ಲಿ ಕಠಿಣ ನಿಲುವು'
ಕ.ಪ್ರ.ವಾರ್ತೆ, ಕಡೂರು, ಜೂ. 16 ಅಧಿಕಾರಿಗಳ ಬಳಿ ತಿಂಗಳ ಲೆಕ್ಕಾಚಾರ ನನ್ನದಲ್ಲ, ಅಧಿಕಾರಿಗಳಿಗೆ ಕಿರುಕುಳ ಕೊಡುವ ಪ್ರವೃತ್ತಿಯೂ ನನ್ನದಲ್ಲ. ಕಚೇರಿಗಳಿಗೆ ಬರುವ ಬಡವರ ಸಾರ್ವಜನಿಕರಿಗೆ ಆಗಬೇಕಾಗಿರುವ ಕೆಲಸವನ್ನು ಅಲೆಸದೆ ಮಾಡಿಕೊಡುವುದು ನಿಮ್ಮ ಕರ್ತವ್ಯವಾಗಿದ್ದು, ಅದಕ್ಕೆ ಸತಾಯಿಸಿದಲ್ಲಿ ಮಾತ್ರ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಶಾಸಕ ವೈ. ಎಸ್.ವಿ. ದತ್ತ ಹೇಳಿದರು.
ಅವರು ಕಡೂರು ತಾಪಂ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪರಿಚಯಾತ್ಮಕ ಮತ್ತು ಪರೀಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಸುಗಮ ಕಾರ್ಯ: ಗ್ರಾಮಾಂತರ ಪ್ರದೇಶದ ಜನರು ನನಗೆ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ್ದು, ಗ್ರಾಮಾಂತರ ಪ್ರದೇಶದವರ ಕೆಲಸಗಳೇ ಕಚೇರಿಗಳಲ್ಲಿ ಹೆಚ್ಚಿರುವುದರಿಂದ ದೂರದಿಂದ ಬರುವ ಬಡಬಗ್ಗರ ಕೆಲಸಗಳನ್ನು ಮಾಡಿಕೊಡಬೇಕು. ಹಿಂದಿನ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳ ಸಂಬಂಧಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಆರ್ಥಿಕ ವಿಷಯದಲ್ಲಿ ಯಾವ ಅಧಿಕಾರಿ ಬಳಿಯೂ ಕೂಡ ನಾನು ವೈಯಕ್ತಿಕ ವ್ಯವಹಾರ ಇಟ್ಟುಕೊಳ್ಳುವುದಿಲ್ಲ. ಇದನ್ನು ವಿಪ ಸದಸ್ಯರ ಅವಧಿಯಲ್ಲಿ ನನ್ನ ನಡವಳಿಕೆಯನ್ನು ಅಧಿಕಾರಿಗಳು ಗಮನಿಸಿರಬಹುದು. ತಾಲೂಕು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಸ್ಪಂದನೆಗೆ ತಕ್ಕಂತೆ ಸ್ಪಂದಿಸಿದಲ್ಲಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಬಹುದು. ನನ್ನಿಂದ ನಿಮಗೆ ಯಾವುದೇ ಕಿರುಕುಳ ಇಲ್ಲದ ಮೇಲೆ ನಿಮ್ಮಿಂದಲೂ ಕೂಡ ಜನರಿಗೆ ಕಿರುಕುಳ ಆಗಬಾರದು ಎಂಬುದು ನನ್ನ ಆಶಯ ಎಂದರು.
ಅಸಹಾಯಕರಿಗೆ ಬೇಡ: ನಾವು ರಾಜಕಾರಣಿಗಳು, ಕೆಲವೊಮ್ಮೆ ತಪ್ಪಿಸಿಕೊಲ್ಳುವ ತಂತ್ರ ಕೂಡ ಮಾಡುತ್ತೇವೆ. ಆದರೆ ಅಂತಹ ಕೆಟ್ಟ ಪ್ರವೃತ್ತಿಯನ್ನು ಕಡೂರು ಕ್ಷೇತ್ರದಲ್ಲಿ ಅಸಹಾಯಕರಿಗೆ ಮಾಡುವುದು ಬೇಡ.
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಾನು ನಿರೀಕ್ಷೆ ಮಾಡಿದಷ್ಟು ಕೆಲಸ ಮಾಡಲು ಆಗದಿದ್ದರೂ, ನನ್ನ ವೇಗಕ್ಕೆ ತಕ್ಕಂತೆ ನೀವೂ ಕೂಡ ಸ್ಪಂದಿಸಿದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ ಎಂದರು.
ಒಬ್ಬ ಶಾಸಕನಾಗಿ ನನ್ನ ಇತಿ ಮಿತಿಯೊಳಗೆ ಸರ್ಕಾರದಿಂದ ತರುವ ಅನುದಾನವು ಎಲ್ಲಿಯೂ ಲೋಪವಾಗದಂತೆ ವಿನಿಯೋಗಿಸಿ, ಕಡೂರು ಕ್ಷೇತ್ರದ ಬಗ್ಗೆ ನಾನು ಇಟ್ಟುಕೊಂಡಿರುವ ಕನಸಿನ ಮಾದರಿ ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಸಾರ್ವಜನಿಕರು ಮತ್ತು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳಾದ ಯಾಲಕ್ಕಿಗೌಡ, ಜಗದೀಶ್ ಕುಮಾರ್, ವಿಠಲ್, ನಾಗೇಂದ್ರ ನಾರಾಯಣ್, ರಮೇಶ್, ಕೋದಂಡರಾಮಯ್ಯ, ರವಿಶಂಕರ್, ಶಿವಪ್ರಕಾಶ್, ತಾಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್ ಶಾರದಾಂಬ, ತಾಪಂ ಇ.ಒ. ಮೂರ್ತಿ, ಕರಿಸಿದ್ದಯ್ಯ, ರಂಗನಾಥ್, ಡಾ ಎಸ್.ಕೆ. ಪ್ರಭು, ಪ್ರಕಾಶಮೂರ್ತಿ, ಸಂಜಯ್, ಶಿವಣ್ಣ, ಡಾ.ಪರಪ್ಪ, ಡಾ. ವಾಸುದೇವಮೂರ್ತಿ,ಕುಮಾರ ನಾಯ್ಕ, ಹರೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.