ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ
ಶೃಂಗೇರಿ: ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ, ಸಿಪಿಐ, ಬಿಜೆಪಿ ನಗರ ಮೋರ್ಚಾ ಖಂಡಿಸಿವೆ. ನಗರ ಮೋರ್ಚಾ ಅಧ್ಯಕ್ಷ ಮುರುಳಿಧರ ಪೈ ಹೇಳಿಕೆಯಲ್ಲಿ, ಕೇಂದ್ರ ಸರ್ಕಾರ ಪದೇ ಪದೇ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿದ್ದು, ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಡಿಎಸ್‌ಎಸ್ (ಜಿಲ್ಲಾ ಸಹ ಸಂಚಾಲಕ ಕರಡಯ್ಯ ಹೇಳಿಕೆ ನೀಡಿ, ಕೇಂದ್ರ ಸರ್ಕಾರದ ಕ್ರಮ ಖಂಡಿಸಿದ್ದಾರೆ.
ಇಂದಿನಿಂದ ಪೂರಕ ಎಸ್ಸೆಸ್ಸೆಎಲ್ಸಿ ಪರೀಕ್ಷೆ
ಚಿಕ್ಕಮಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜಿಲ್ಲೆಯಲ್ಲಿ ಸೋಮವಾರದಿಂದ ಜೂ. 24ರವರೆಗೆ ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಎಂ. ಕಾಂತರಾಜು ಹೇಳಿದ್ದಾರೆ. ಜಿಲ್ಲೆಯ 12 ಕೇಂದ್ರಗಳಲ್ಲಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಜಾಗೃತ ದಳವನ್ನು ರಚನೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಾಗೃತದಳದ ಮೊದಲನೇ ತಂಡದಲ್ಲಿ ನಾಲ್ವರು ಅಧಿಕಾರಿಗಳು, ಎರಡನೇ ತಂಡದಲ್ಲಿ ನಾಲ್ಕು ಅಧಿಕಾರಿಗಳು, ಮೂರನೇ ತಂಡದಲ್ಲಿ ಮೂವರು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.