ಪ್ರವಾಸಿ ತಾಣಗಳ 'ಅರಣ್ಯ ರೋದನ'
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.16
ಅರಣ್ಯ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅದೇ ರೀತಿ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡುತ್ತಿದೆ. ಆದರೆ, ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಸರ್ಕಾರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಹಣವನ್ನು ಕಾಲ ಕಾಲಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸುಮಾರು 30 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಇಲ್ಲಿನ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೆ ಬಿಡುಗಡೆ ಮಾಡಿರುವ ಹಣದಲ್ಲಿ 5 ಕಿ.ಮೀ. ಕಾಂಕ್ರೀಟ್ ರಸ್ತೆ ಹಾಗೂ 12 ಕಿ.ಮೀ.ಗೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಇದೇ ರಸ್ತೆಗೆ ಹೊಂದಿಕೊಂಡಿರುವ 600 ಮೀಟರ್ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಕಾರಣ, ಈ ವ್ಯಾಪ್ತಿ ಭದ್ರಾ ವನ್ಯಜೀವಿ ವಿಭಾಗಕ್ಕೆ ಒಳಪಡುವುದರಿಂದ ಇದಕ್ಕೆ ಸಕ್ಷಮ ವನ್ಯಜೀವಿ ಪ್ರಾಧಿಕಾರದ ಅನುಮತಿ ಬೇಕಾಗಿದೆ.
ಶಿಫಾರಸ್ಸಿನ ಪ್ರಸ್ತಾವನೆ: ಇದಕ್ಕಾಗಿ ವನ್ಯಜೀವಿ ವಿಭಾಗದ ಅನುಮತಿ ಪಡೆಯಲು ಭದ್ರಾ ಹುಲಿ ಮೀಸಲು ಅರಣ್ಯದ ನಿರ್ದೇಶಕರಿಗೆ ಮತ್ತು ಸಕ್ಷಮ ವನ್ಯಜೀವಿ ಪ್ರಾಧಿಕಾರಕ್ಕೆ 2012ರ ಜೂನ್ 14 ರಂದು ಶಿಫಾರಸ್ಸಿನ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಜತೆಗೆ 2012ರ ಸೆಪ್ಟಂಬರ್ 11 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಮಗಾರಿ ನಿರ್ವಹಿಸಲು ಅನುಮತಿ ಕೋರಿ ಪತ್ರವನ್ನು ಬರೆದು ವರ್ಷ ಕಳೆದರೂ ಈವರೆಗೆ ಅನುಮತಿ ಸಿಕ್ಕಿರುವುದಿಲ್ಲ. ಅದುದರಿಂದ ಇಲ್ಲಿನ ಕಾಮಗಾರಿ ನೆನಗುದಿಗೆ ಬಿದ್ದಿದೆ.
ವಿಹಾರಧಾಮ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೆಮ್ಮಣ್ಣುಗುಂಡಿ ವಿಹಾರ ಧಾಮ ಎಲ್ಲಾ ಕಾಲದಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿಗೆ ಪ್ರತಿವರ್ಷ ದೇಶಿಯ ಹಾಗೂ ನೂರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ನವೀಕರಣ: ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರವಾಸಿಗರು ತಂಗುವ ಕಾಟೇಜ್‌ಗಳನ್ನು ನವೀಕರಣಗೊಳಿಸಲಾಗುತ್ತಿದೆ.
ಈ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ.
ಡಾಂಬರೀಕರಣ: ಇಲ್ಲಿನ ರಸ್ತೆ ತುಂಬಾ ಹಾಳಾಗಿದ್ದರಿಂದ ಪ್ರವಾಸಿಗರಿಗೆ ಇಲ್ಲಿಗೆ ಹೋಗಲು ಕಿರಿ ಕಿರಿಯಾಗುತ್ತಿತ್ತು. ಅದುದರಿಂದ 5 ಕಿ.ಮೀ. ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 9 ಕೋಟಿ ರು. ಹಾಗೂ 12 ಕಿ.ಮೀ. ಡಾಂಬರೀಕರಣಕ್ಕೆ 6 ಕೋಟಿ ರುಪಾಯಿ ಬಿಡುಗಡೆಯಾಗಿದ್ದು, ಈ ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ. ಕಲ್ಲತ್ತಗಿರಿ ಬಳಿ 300 ಮೀಟರ್ ಕಾಂಕ್ರಿಟ್ ರಸ್ತೆ ಮಾತ್ರ ಬಾಕಿ ಉಳಿದುಕೊಂಡಿದೆ. ಇದೇ ರಸ್ತೆಗೆ ಸಂಪರ್ಕ ರಸ್ತೆ 600 ಮೀಟರ್ ಭದ್ರಾ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವುದರಿಂದ ರಸ್ತೆ ನಿರ್ಮಾಣಕ್ಕೆ ವನ್ಯಜೀವಿ ವಿಭಾಗದ ಅನುಮತಿ ಬೇಕಾಗಿದೆ. ಆದರೆ, ಈವರೆಗೆ ಸಿಕ್ಕಿರುವುದಿಲ್ಲ.
ಪ್ರವಾಸಿಗರಿಗೆ ಬ್ರೇಕ್: 600 ಮೀಟರ್ ರಸ್ತೆ ನಿರ್ಮಾಣಕ್ಕೆ ಮಾತ್ರ ಭದ್ರಾ ವನ್ಯಜೀವಿ ವಿಭಾಗ ಅಡ್ಡಗಾಲು ಹಾಕಿಲ್ಲ. ಹೆಬ್ಬೆ ಜಲಪಾತದ ರಸ್ತೆಯೂ ಭದ್ರಾ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದ್ದರಿಂದ ಆ ಭಾಗದಲ್ಲಿ ಪ್ರವಾಸಿಗರ ವಾಹನಗಳು ತೆರಳದಂತೆ ಅರಣ್ಯ ಇಲಾಖೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿಯನ್ನು ಹಾಕಿದೆ.
ಅರಣ್ಯ ಇಲಾಖೆಯ ಈ ಕ್ರಮ ಪ್ರವಾಸಿಗರು ಕೆಮ್ಮಣ್ಣುಗುಂಡಿ ಮತ್ತು ಹೆಬ್ಬೆ ಜಲಪಾತಕ್ಕೆ ತೆರಳದಂತೆ ತಡೆ ಹಾಕಿದೆ.
ಒಂದೆಡೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡುತ್ತಿದೆ. ಇನ್ನೊಂದೆಡೆ ಆ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ನಿರ್ಭಂದ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಜಿಲ್ಲಾಡಳಿತವೇ ಉತ್ತರ ಕಂಡುಕೊಳ್ಳಬೇಕು.
-ಆರ್. ತಾರಾನಾಥ್