ಮಳೆ: ವಿದ್ಯುತ್, ಕುಡಿಯುವ ನೀರಿಗಾಗಿ ಪರದಾಟ
ಕ.ಪ್ರ.ವಾರ್ತೆ ಶೃಂಗೇರಿ ಜೂ.16 ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಯ ಆರ್ಭಟ ಮುಂದುವರೆದಿದ್ದು ವಿದ್ಯುತ್, ಕುಡಿಯುವ ನೀರಿಗಾಗಿ ಪರದಾಟವೂ ಮುಂದುವರೆದಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ. ಮಳೆ ಗಾಳಿಗೆ ಮರಗಳು ಉರುಳಿ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು ಉರುಳಿ ಬೀಳುತ್ತಿದ್ದು, ತಂತಿಗಳು ತುಂಡಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಳ್ಳುತ್ತಿದೆ. ಪರಿಣಾಮ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಕೆಲವೆಡೆ ಉಂಟಾಗಿದೆ.
ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 13 ರ ಕೆರೆಕಟ್ಟೆ ಯಿಂದ ಶೃಂಗೇರಿವರೆಗಿನ ರಸ್ತೆಯುದ್ದಕ್ಕೂ ಮರಗಳು ರಸ್ತೆಗುರುಳುತ್ತಿವೆ. ವಾಹನಗಳು ನಿಯಂತ್ರಣ ತಪ್ಪಿ ಹೊಂಡಕ್ಕುರುಳುತ್ತಿವೆ.
ಗಾಳಿಗೆ ಅಡಕೆ ಮರಗಳು ನೆಲಕ್ಕುರುಳುತ್ತಿವೆ. ಮೆಸ್ಕಾಂ ನಿರ್ಲಕ್ಷ್ಯ: ತಾಲೂಕಿನಾದ್ಯಂತ ವಿದ್ಯುತ್ ಲೈನ್ ಮೇಲೆ ಬೃಹತ್ ಮರಗಳು ಇದ್ದರೂ ಬೇಸಿಗೆಯಲ್ಲಿ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದ್ದರಿಂದ ಅವು ಲೈನ್ ಮೇಲೆ ಉರುಳಿ ಬೀಳುತ್ತಿರುವುದರ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಳ್ಳುತ್ತಿದೆ.
ಅಲ್ಲದೇ ರೋಗದಿಂದ ಒಣಗಿನಿಂತ ಬಿದಿರು ಮೆಳೆಗಳು ಗಾಳಿಗೆ ವಿದ್ಯುತ್ ಲೈನ್ ಮೇಲೆ ಉರುಳುತ್ತಿವೆ.
ಈಗ ವಾರಗಟ್ಟಲೇ ವಿದ್ಯುತ್ ಇಲ್ಲ. ಬೇಗಾರು ಬಳಿ ಬೃಹತ್ ಮರ ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದಿದ್ದರಿಂದ ಐದಾರು ವಿದ್ಯುತ್ ಕಂಬಗಳ ತಂತಿ ತುಂಡಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.
ದುರ್ಗಾದೇವಸ್ಥಾನ ಸಂಕ್ಲಾಪುರ ಬಳಿ ಬೃಹತ್ ಬಿದಿರು ಮೆಳೆ ರಸ್ತೆಗುರುಳಿದ್ದರಿಂದ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದಿನಗಟ್ಟಲೇ ವಿದ್ಯುತ್ ಸಂಪರ್ಕವಿಲ್ಲದೆ ಜನರು ಅಗತ್ಯ ಕೆಲಸಗಳಿಗೆ ಪರದಾಡಬೇಕಿದೆ.
ಮೆಸ್ಕಾಂ ಇಲಾಖೆ ಊರು ಹೋದ ಮೇಲೆ ತೋರಣ ಹಾಕಿದಂತೆ ಬೇಸಿಗೆಯಲ್ಲಿ ಲೈನ್ ಕ್ಲಿಯರ್ ಮಾಡದೇ ಮರಗಳು ಉರುಳಿ ಬಿದ್ದು ಕಂಬಗಳು, ಲೈನ್ ಪುಡಿಯಾದ ಮೇಲೆ ಲೈನ್ ಕ್ಲಿಯರ್ ಮಾಡಲು ಹೊರಟಿದೆ.
ಕುಡಿಯಲು ಮಳೆ ನೀರೇ ಗತಿ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದರೂ ಕುಡಿಯುವ ನೀರಿನ ಅಭಾವದಿಂದ ಮಳೆ ನೀರೇ ಗತಿಯಾಗಿದೆ.
ಕಳೆದ ಕೆಲ ದಿನಗಳಿಂದ ಕುಡಿಯುವ ನೀರು ಇಲ್ಲದಂತಾಗಿದೆ. ನೆಮ್ಮಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿ ಮಳೆ ನೀರು ಅವಲಂಬಿಸಬೇಕಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿದಿಗಳು, ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದೆಡೆ ವಿದ್ಯುತ್ ಸಮಸ್ಯೆ, ಮೊತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಮುಂದುವರೆದಿದೆ.
ಮರ್ಕಲ್ ಪಂಚಾಯಿತಿ ಮಾಗೋಡು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.ದೂರವಾಣಿ ಸೌಲಭ್ಯ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆಯಾಗಿ ತಾಲೂಕಿನಾದ್ಯಂತ ಗಾಳಿ ಮಳೆಯ ಆರ್ಭಟ ಮುಂದುವರೆದಿದೆ.