ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಳೆಯಿಂದ ಕತ್ತಲಾದ ಮಲೆನಾಡು

Lingaraj Badiger
Updated On : 17 Jun 2013, 11:00 am

ಕ.ಪ್ರ. ವಾರ್ತೆ  ನರಸಿಂಹರಾಜಪುರ  ಜೂ.16
ಈ ವರ್ಷ ಮುಂಗಾರು ಆರಂಭದಲ್ಲೇ ಗಾಳಿ, ಮಳೆಯಿಂದಾಗಿ ವಿದ್ಯುತ್ ತಂತಿ ಮೇಲೆ ಸಾಲು ಗಟ್ಟಿಕಟ್ಟೆ ಬಂದ ಬಿದಿರುಗಳು ಬೀಳಲಾರಂಭಿಸಿದ್ದು, ಕಳೆದ 4 ದಿನಗಳಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ.
ವಿದ್ಯುತ್ ಇಲ್ಲದೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಹ ತೊಂದರೆಯಾಗುತ್ತಿದೆ.
  ವಿದ್ಯುತ್ ಬಂದರೂ ತಕ್ಷಣ ಹೋಗುತ್ತಿದ್ದು, ವಿದ್ಯುತ್ ಕಣ್ಣಮುಚ್ಚಾಲೆ ಮುಂದುವರಿದಿದೆ. ಗ್ರಾಮೀಣ ಭಾಗದವರು ಕತ್ತಲೆಯಲ್ಲೇ ಕಳೆಯುವಂತಾಗಿದೆ. ಬಿದಿರಿಗೆ ಕಟ್ಟೆ ಬಂದಿದ್ದು ಅವಸಾನ ಅಂಚಿನಲ್ಲಿರುವ ಬಿದಿರು ಹಿಂಡಿಲು ಮಳೆ, ಗಾಳಿಗೆ ವಿದ್ಯುತ್ ಲೈನ್ ಮೇಲೆ ಉರುಳುತ್ತಿರುವುದು ವಿದ್ಯುತ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ಇಲಾಖೆಗೆ ಸವಾಲು: ಒಂದು ಕಡೆಯಿಂದ ವಿದ್ಯುತ್ ತಂತಿಯ ಮೇಲೆ ಬಿದ್ದ ಬಿದಿರು ತೆಗೆದು ಲೈನ್ ಕ್ಲಿಯರ್ ಮಾಡುತ್ತಿದ್ದಂತೆ ಇನ್ನೊಂದು ಬದಿಯಲ್ಲಿ ಬಿದಿರು ಬೀಳುತ್ತಿರುವುದು ಮೆಸ್ಕಾಂ ಇಲಾಖೆಯವರಿಗೆ ಸವಾಲಾಗಿ ಪರಿಣಮಿಸಿದೆ.
  ಜೊತೆಗೆ ಗಾಳಿಯಿಂದ ಮರದ ಗೆಲ್ಲು ಬೀಳುತ್ತಿರುವುದು, ವಿದ್ಯುತ್ ಕಂಬಗಳು ಉರುಳುತ್ತಿರುವುದು ಸಹ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ.
ಶೇ.60 ಸಿಬ್ಬಂದಿ ಕೊರತೆ: ಮೆಸ್ಕಾಂ ಇಲಾಖೆ ಮೂಲಗಳ ಪ್ರಕಾರ ನರಸಿಂಹರಾಜಪುರ ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿರುವುದು ಸಹ ಸಮರ್ಪಕ ವಿದ್ಯುತ್ ಕೊಡಲು ಅಡಚಣೆ ಆಗುತ್ತಿದೆ.
ತಾಲೂಕಿನ 11 ಗ್ರಾಮ ಪಂಚಾಯ್ತಿಗಳು ನರಸಿಂಹರಾಜಪುರ ಮೆಸ್ಕಾಂ ವ್ಯಾಪ್ತಿಗೆ ಬರಲಿದೆ. ಈ ಹಿಂದೆ ನರಸಿಂಹರಾಜಪುರ ಹಾಗೂ ಮುತ್ತಿನಕೊಪ್ಪ ಸೆಕ್ಷನ್ ಬೇರೆ ಬೇರೆ ಮಾಡಲು ಪ್ರಸ್ತಾವನೆ ಹೋಗಿದ್ದರೂ ಕಾರ್ಯಗತವಾಗಿಲ್ಲ.ಈಗ ಇರುವ ಸಿಬ್ಬಂದಿಗಳೇ 500ಕ್ಕೂ ಹೆಚ್ಚು ಟಿ.ಸಿ.ಗಳನ್ನು ನೋಡಿಕೊಳ್ಳಬೇಕಾಗಿದೆ.
ನರಸಿಂಹರಾಜಪುರ ಮೆಸ್ಕಾಂ ಇಲಾಖೆಗೆ 27 ಜನ ಸಿಬ್ಬಂದಿಗಳು ಇರಬೇಕಾಗಿತ್ತು. ಆದರೆ, 13 ಜನರ ಮಾತ್ರ ಇದ್ದಾರೆ. ಅದರಲ್ಲಿ ಇಬ್ಬರು ನಿವೃತ್ತಿ ಅಂಚಿನಲ್ಲಿದ್ದಾರೆ. ಲೈನ್‌ಮ್ಯಾನ್‌ಗಳ ಕೊರತೆಯಿಂದ ಮಳೆಗಾಲದಲ್ಲಿ ತಕ್ಷಣ ಲೈನ್‌ಕ್ಲಿಯರ್ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಕಳೆದ 2 ತಿಂಗಳಿಂದ 115 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
 ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಇರುವ ಸಿಬ್ಬಂದಿಗಳು ಕೆಲಸ ಮಾಡಿದರೂ ಮುಖ್ಯಲೈನ್‌ಗಳಿಗೆ ಸಮರ್ಪಕ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬಿದಿರಿಗೆ ಕಟ್ಟೆ ಬಂದು ಲೈನ್ ಮೇಲೆ ಉರುಳಿ ಬೀಳುತ್ತಿರುವುದೇ ಆಗಿದೆ ಎನ್ನುತ್ತಾರೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement