ಗ್ರಾಮೀಣ ಸೇವೆಗೆ ಗುಡ್ ಬೈ ಹೇಳುವ ವೈದ್ಯರಿಗೆ ಬ್ರೇಕ್
ಚಿಕ್ಕಮಗಳೂರು:ಗ್ರಾಮೀಣ ಪ್ರದೇಶದಲ್ಲಿ ಸಲ್ಲಿಸುವ ಸೇವೆಗೆ ಅರ್ಧದಲ್ಲೇ ಗುಡ್ ಬೈ ಹೇಳುವ ವೈದ್ಯರಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈಗ ವಿಧಿಸುತ್ತಿರುವ ದಂಡದ ಮೊತ್ತವನ್ನು ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ವಿಷಯವನ್ನು ತಿಳಿಸಿದರು.
ಮೂಡಿಗೆರೆ ತಾಲೂಕಿನಲ್ಲಿ ಸುಮಾರು 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಇಂತಹ ಕಡೆಗಳಲ್ಲಿ ಬದಲಿ ವ್ಯವಸ್ಥೆ ಮಾಡಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾಡಿದ ಮನವಿ ಮಾಡಿದರು.
900 ವೈದ್ಯರು ಗುಡ್ ಬೈ: ಇದಕ್ಕೆ ಉತ್ತರಿಸಿದ ಸಚಿವರು, ಇದು, ಕೇವಲ ಒಂದೆ ಕಡೆ ಇರುವ ಸಮಸ್ಯೆಯಲ್ಲ.
ರಾಜ್ಯದ ಹಲವೆಡೆ ಈ ರೀತಿಯ ತೊಂದರೆ ಇದೆ. ವೈದ್ಯರನ್ನು ಕೌನ್ಸಿಲಿಂಗ್ ಮೂಲಕ ನೇಮಕ ಮಾಡಿಕೊಳ್ಳುವಾಗ ಗ್ರಾಮೀಣ ಸೇವೆ ಕಡ್ಡಾಯ. ಸೇವೆಗೆ ಸೇರಿದ ಒಂದು ವರ್ಷದೊಳಗೆ ಬಿಟ್ಟು ಹೋದಲ್ಲಿ ಎಂಬಿಬಿಎಸ್ ವೈದ್ಯರಿಗೆ 1 ಲಕ್ಷ, ಡಿಪ್ಲೋಮಾ ವೈದ್ಯರಿಗೆ 3 ಲಕ್ಷ, ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ 5 ಲಕ್ಷ ರು. ದಂಡ ವಿಧಿಸುವ ಷರತ್ತು ಇದ್ದರೂ ಸಹ ಸುಮಾರು 900 ವೈದ್ಯರು ಅರ್ಧದಲ್ಲೇ ಕೆಲಸ ಬಿಟ್ಟು ಹೋಗಿದ್ದಾರೆ ಎಂದರು.
ಅದುದರಿಂದ ದಂಡದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಅಂದರೆ 1 ಲಕ್ಷದಿಂದ 10 ಲಕ್ಷಕ್ಕೆ, 3 ರಿಂದ 15 ಲಕ್ಷಕ್ಕೆ, 5 ರಿಂದ 20 ಲಕ್ಷಕ್ಕೆ ಏರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.