ಡೆಂಘೀಗೆ ನವ ವಿವಾಹಿತ ಬಲಿ
ಕ.ಪ್ರ.ವಾರ್ತೆ, ಕಡೂರು, ಜೂ. 18
ಕೇವಲ 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಡೆಂಘೀ ಸೋಂಕಿಗೆ ಬಲಿಯಾಗಿ ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಅಸುನೀಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ನಾಗರಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಣಸಾಗರ ಗ್ರಾಮದಿಂದ ವರದಿಯಾಗಿದೆ.
ಕಳೆದ 20 ದಿನಗಳ ಹಿಂದೆ ಗುಣಸಾಗರ ಗ್ರಾಮದ ಕರಿಯಪ್ಪ ಎಂಬುವವರ ಪುತ್ರ ಲಕ್ಷ್ಮಣ್(25) ಎಂಬುವರಿಗೆ ಕಡೂರು ತಾಲೂಕಿನ ಕಂಸಾಗರ ಗ್ರಾಮದ ಸುಧಾ ಎಂಬುವವರನ್ನು ಮದುವೆ ಮಾಡಿಕೊಡಲಾಗಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಲಕ್ಷ್ಮಣ್ಗೆ ಜ್ವರ ಕಾಣಿಸಿಕೊಂಡಿದ್ದರಿಂದ ನಿಡಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಮಾರ್ಗ ಮಧ್ಯೆದಲ್ಲೇ ನಿಧನ: ಆದರೂ ಸಹ ಜ್ವರದ ತೀವ್ರತೆ ಹೆಚ್ಚಾದ್ದರಿಂದ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ರಕ್ತ ಪರೀಕ್ಷೆ ನಡೆಸಿದಾಗ ಡೆಂಘೀ ಸೋಂಕು ಕಂಡುಬಂದಿದೆ. ವೈದ್ಯರ ಸಲಹೆಯಂತೆ ಸೋಮವಾರ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರವಾಗ ಮಾರ್ಗ ಮಧ್ಯೆದಲ್ಲಿಯೇ ಅಸುನೀಗಿದ್ದಾರೆ. ಮಂಗಳವಾರ ಶವವನ್ನು ಗುಣಸಾಗರಕ್ಕೆ ಕರೆತರಲಾಯಿತು.
ಆರೋಗ್ಯ ಸಚಿವ ಯು.ಟಿ.ಖಾದರ್ ಜಿಲ್ಲಾ ಕೇಂದ್ರಕ್ಕೆ ಬಂದಿದರೂ ಕೂಡ ಸ್ಥಳಕ್ಕೆ ಬರಲಿಲ್ಲ.
ಸಿಟಿ ರವಿ ನೆರವು: ಶಾಸಕ ಸಿ.ಟಿ. ರವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಆರೋಗ್ಯ ಇಲಾಖೆಯಿಂದ ವರದಿ ಬಂದ ನಂತರ ಸರ್ಕಾರದಿಂದ 1 ಲಕ್ಷರು. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ತಕ್ಷಣದ ಕಾರ್ಯಗಳಿಗ ವೈಯಕ್ತಿಕವಾಗಿ ನಗದು ನೀಡಿದರು.
ಸ್ಥಳದಲ್ಲಿ ನಾಗರಾಳು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಜಿ.ಎಂ. ವಿಜಯಕುಮಾರ್, ಮಾಜಿ ಅಧ್ಯಕ್ಷ ಶಾರದಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.