ಪೌರಾಯುಕ್ತ ವರ್ಗಾವಣೆ: ಧರಣಿ
ಚಿಕ್ಕಮಗಳೂರು: ನಗರಸಭೆಯ ಪೌರಾಯುಕ್ತ ಎಚ್.ಜಿ. ಪ್ರಭಾಕರ್ ಅವರು ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಒಂದೂವರೆ ವರ್ಷಗಳ ಕಾಲ ನಗರಸಭೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಬಡ್ತಿ ನೀಡಿ ಸರ್ಕಾರ ವರ್ಗಾವಣೆ ಮಾಡಿದೆ.
ಖಂಡನೆ: ನಗರಸಭೆಯ ಆಯುಕ್ತ ಹೆಚ್.ಜಿ. ಪ್ರಭಾಕರ್ ಅವರ ವಗಾವಣೆಯನ್ನು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಖಂಡಿಸಿದ್ದಾರೆ. ನಗರಸಭೆಗೆ ಆಯುಕ್ತರಾಗಿ ಬಂದಾಗಿನಿಂದ ಹೆಚ್.ಜಿ. ಪ್ರಭಾಕರ್ ಅವರು ದಕ್ಷ ಆಡಳಿತವನ್ನು ನೀಡಿದ್ದು ನಿಷ್ಠೆಗೆ ಹೆಸರಾದವರು. ಯಾವುದೇ ಸಾರ್ವಜನಿಕರ ಸಮಸ್ಯೆಗಳು ಬಂದಲ್ಲಿ ಪಾದರಸದ ರೀತಿ ಸ್ಪಂದಿಸಿ ಸಾರ್ವಜನಿಕ ಮನ್ನಣೆ ಗಳಿಸಿದ್ದರು. ನಗರದ ನೈರ್ಮಲ್ಯ, ಪ್ಲಾಸ್ಟಿಕ್ ರಹಿತ ನಗರ, ರಸ್ತೆಗಳ ಅಗಲೀಕರಣ ಇನ್ನೂ ಹತ್ತು ಹಲವು ನಗರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಡಿದ್ದರು ಇಂತಹ ಅಧಿಕಾರಿಗಳನ್ನು ಉಳಿಸಿ ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ ಆಗಬೇಕಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.