ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತ್ತೊಮ್ಮೆ ಬೆರಳಚ್ಚು: ಆಕ್ರೋಶ

Vishwanath S
Updated On : 19 Jun 2013, 12:31 pm

ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.18
ಖಾಯಂ ಪಡಿತರ ಚೀಟಿದಾರರು ಈ ಹಿಂದೆ ನೀಡಿದ್ದ ಬೆರಳಚ್ಚುಗಳನ್ನು ಹಾಳುಗೆಡವಿದ್ದಲ್ಲದೇ ಮರಳಿ ಹೆಬ್ಬೆಟ್ಟಿನ ಗುರುತು ನೀಡಬೇಕೆಂದಿರುವ ಆಹಾರ ಇಲಾಖೆ, ಈ ತಿಂಗಳ ಪಡಿತರ ಪಡೆಯಲು 400 ವ್ಯಹಿಸಿ ಬೆರಳಚ್ಚು ನೀಡಿ ಬರುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಮುಸ್ಲಿಂ ಹಿತರಕ್ಷಣಾ ಸಮಿತಿಯ ಕಿರುಗುಂದ ಅಬ್ಬಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದು, ಇಲಾಖೆ ಬಡವರಿಗೆ ಆಹಾರ ಪದಾರ್ಥವನ್ನು  ಸಮರ್ಪಕವಾಗಿ ವಿತರಿಸಬೇಕು. ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದಿರುವ ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದನ್ನು ಮನಗಾಣಬೇಕು ಎಂದವರು ತಿಳಿಸಿದ್ದಾರೆ.
ಬಡವರಿಗೆ ಹೊರೆ: ವಿದ್ಯುತ್ ಬಿಲ್ ಸಹಿತ ಮನೆ ಕಂದಾಯಗಳ ನೂರಾರು ರೂ.ಗಳನ್ನು ಏಕಕಾಲದಲ್ಲಿ ಪಾವತಿಸಲು ಬಡವರಿಗೆ ಕಷ್ಟವಾಗುತ್ತಿದೆ. ಕೆಲವು ಕುಟುಂಬ ಆಹಾರಕ್ಕಾಗಿ ಪರದಾಡುತ್ತಿರುವಾಗ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಖರೀದಿಗೆ ಹೋದರೆ ಹೆಬ್ಬೆಟ್ಟಿನ ಗುರುತು ನೀಡಿ ಬರುವಂತೆ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಮಳೆಗಾಲದಲ್ಲಿ ಕೆಲಸವಿಲ್ಲದೇ ಆಹಾರ ಪದಾರ್ಥ, ಮಕ್ಕಳ ವಿದ್ಯಾಭ್ಯಾಸ, ವಸ್ತ್ರ ಖರೀದಿಗೆ ಹಣ ಹೊಂದಿಸಲು ಹೈರಾಣಾಗಿರುವಾಗ ಇಲಾಖೆ ಹೇರಿರುವ ಇಂತಹ ಕ್ರಮವನ್ನು ಖಂಡಿಸಬೇಕಾಗಿದೆ ಎಂದಿದ್ದಾರೆ.
ಆದ್ದರಿಂದ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ ಬಡವರಿಗೆ ಆಹಾರ ಪದಾರ್ಥವನ್ನು ಯಾವುದೇ ಒತ್ತಡವಿಲ್ಲದೇ ತಕ್ಷಣ ಖರೀದಿಸಲು ಅವಕಾಶ ನೀಡಬೇಕು. ಅಧಿಕಾರಿಗಳು ಕುಳಿತಲ್ಲಿಯೇ ಮನಸಿಗೆ ಬಂದಂತೆ ನಿಯಮಗಳನ್ನು ರೂಪಿಸಿ ಬಡವರ ಮೇಲೆ ಆರ್ಥಿಕ ಹೊರೆ ಹೇರಿರುವುದನ್ನು ತಕ್ಷಣ ತಡೆಗಟ್ಟಬೇಕು.
ಬಯೋವುಟ್ರಿಕ್ ವ್ಯವಸ್ಥೆಗೆ ಸಂಬಂಧವಿಲ್ಲದ ಮನೆ ಕಂದಾಯ ಮತ್ತು ವಿದ್ಯುತ್ ಬಿಲ್ ಪಾವತಿಸುವ ಸೂಚನೆಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement