ಮಹಿಳೆಯರಿಗೆ ಸಂಘಟನೆ ಅತಿ ಅಗತ್ಯ: ಮಮ್ತಾಜ್ ಬೇಗಂ
ಕ.ಪ್ರ.ವಾರ್ತೆ ಮೂಡಿಗೆರೆ ಜೂ.18
ಮಹಿಳೆಯರು ಸಂಘಟಿತರಾಗಿ ಧೈರ್ಯದಿಂದ ಮುಂದುವರೆದಲ್ಲಿ ಯಾವುದೇ ಕಷ್ಟದ ಕೆಲಸದಲ್ಲಿಯೂ ಯಶಸ್ಸನ್ನು ಕಾಣಬಹುದು ಎಂದು ಕಲಾ ಸಂಗಮದ ಸಂಚಾಲಕಿ ಮಮ್ತಾಜ್ ಬೇಗಂ ಹೇಳಿದರು.
ತಾಲೂಕಿನ ಕಳಸ ಹೋಬಳಿ ಸಂಸೆಯ ಹಿರಿಯ ಪ್ರಾಥಾಮಿಕ ಶಾಲೆಯ ಸಭಾಂಗಣದಲ್ಲಿ ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಘದ ಸಂಸೆ ಪ್ರಾಂತ್ಯದ ಜ್ಞಾನಜ್ಯೋತಿ ಮಹಾ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಮುಖಿ ಚಿಂತೆನೆ: ಕುಟುಂಬದ ಸಂಕುಚಿತ ವಿಷಯಗಳಿಂದ ಹೊರಬಂದು ಸಮಾಜಮುಖಿ ಚಿಂತನೆಯನ್ನು ಮಹಿಳೆಯರು ಮಾಡಿದ್ದಲ್ಲಿ ಇಡೀ ಸಮಾಜವನ್ನೇ ಪರಿವರ್ತಿಸಬಹುದು. ಕೇವಲ ಆರ್ಥಿಕ ಕ್ರೋಢೀಕರಣ ಉದ್ದೇಶದಿಂದ ಮಾತ್ರ ಈ ಸಂಘವನ್ನು ಬಳಸದೇ ಸಮಾಜಕ್ಕೆ ಕಗ್ಗಂಟಾಗಿರುವ ಭ್ರಷ್ಟಾಚಾರ, ಮಹಿಳಾ ಶೋಷಣೆ, ಸಮಾಜವನ್ನು ಮದ್ಯಪಾನ ಜೂಜುಗಳಿಂದ ಮುಕ್ತಗೊಳಿಸುವ ರಚಾನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವತ್ತ ಸಂಘಟನೆಗಳು ಮುಖ್ಯ ಪಾತ್ರ ವಹಿಸಬೇಕು ಎಂದರು.
ಕಳಸ ಕ್ರೈಸ್ತ ದೇವಾಲಯದ ಧರ್ಮಗುರು ಫಾದರ್ ಮಾರ್ಷಲ್ ಪಿಂಟೋ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಶ್ರೇಯಸ್ ಕುಮಾರ್ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಂಘದ ಅಧ್ಯಕ್ಷೆ ವಿನೋದ ವೇದಿಕೆಯಲ್ಲಿ ಉಪಸ್ಥಿತರಿದ್ದರು.