ಮೆಸ್ಕಾಂ ಕಾರ್ಯವೈಖರಿಗೆ ಗ್ರಾಮಸ್ಥರ ಆಕ್ರೋಶ
ಕ.ಪ್ರ.ವಾರ್ತೆ, ಕೊಪ್ಪ, ಜೂ.18
ತಾಲೂಕಿನ ಬಸ್ರೀಕಟ್ಟೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಯಪುರ ಸಬ್ ಸ್ಟೇಷನ್ಗೆ ಅಗತ್ಯ ಇರುವಷ್ಟು ಸಿಬ್ಬಂದಿ ನೇಮಕ ಮಾಡದೇ ಇರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಿಬ್ಬಂದಿ ನಿಯೋಜಿನೆಗೊಳಿಸಬೇಕೆಂದು ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಮಳೆಗಾಲದ ಮೊದಲೇ ಜಂಗಲ್ ಕ್ಲಿಯರೆನ್ಸ್ಗೆ ಇಲಾಖೆ ಗಮನ ನೀಡದಿದ್ದುದರಿಂದ ಮಳೆಗಾಲದಲ್ಲಿ ಅರಣ್ಯದ ಮಧ್ಯದಲ್ಲಿ ಎಳೆದಿರುವ ವಿದ್ಯುತ್ ತಂತಿ ಮೇಲೆ ಮರ ಬಿದ್ದು, ತಿಂಗಳುಗಟ್ಟಲೇ ವಿದ್ಯುತ್ ಸಂಪರ್ಕವಿಲ್ಲದೇ ಇರುವ ಪರಿಸ್ಥಿತಿ ಎದುರಾಗುತ್ತಿದೆ.
ಶೋಚನೀಯ: ಅದರೆ ತಿಂಗಳು ಗಟ್ಟೆ ವಿದ್ಯುತ್ ಇಲ್ಲದ್ದಿದ್ದರೂ ಮಾಸಿಕ ಶುಲ್ಕವನ್ನು ಮಾತ್ರ ಗ್ರಾಹಕರು ಪಾವತಿ ಮಾಡಬೇಕಾಗಿರುವುದು ಶೋಚನೀಯ. ಇತ್ತೀಚಿಗೆ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಕಳಪೆಯಾಗಿದ್ದು, ವರ್ಷದಲ್ಲಿ ಮುರಿದು ಬಿಳುತ್ತಿವೆ.
ಬಸರೀಕಟ್ಟೆ ಹಾಸ್ಟೆಲ್ ಎದುರಿನ ಪರಿವರ್ತಕವನ್ನು ಬದಲಿಸಲು ಗ್ರಾಮಸ್ಥರೇ ಹಣ ಸೇರಿಸಿ ಕ್ರೇನ್ ತರಿಸಿ ಸಕಲ ಸಿದ್ಧತೆ ಮಾಡಿಕೊಂಡರೂ ಇಲಾಖೆಯವರು ಬರದೇ ಇರುವುದು ನಿಮ್ಮ ಇಲಾಖೆ ಸಿಬ್ಬಂದಿಗಳ ಕಾರ್ಯವೈಖರಿ ಪ್ರದರ್ಶಿಸುತ್ತದೆ ಎಂದು ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಕುಡಿಯಲು ನೀರಿಲ್ಲ: ನೇರಲಕಟ್ಟೆ, ಬರ್ಕನಘಟ್ಟ ಭಾಗದಲ್ಲಿ ವಿದ್ಯುತ್ ಇಲ್ಲದೆ ಕುಡಿಯಲು ನೀರಿಲ್ಲ, ಸುಬ್ಬನಕೊಡಿಗೆ ಭಾಗದ ಜನಕ್ಕೆ ವಿದ್ಯುತ್ ಮರೀಚಿಕೆಯಂತಾಗಿದೆ. ಎಸ್ಟೇಟ್ ಒಳಗೆ ಪರಿವರ್ತಕ ಇದ್ದು, ಅದನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಬೇಕು. ಬದ್ನೇಕಾನ್ ಎಸ್ಟೇಟ್ಗೆ ಕೊಪ್ಪ ಮೆಸ್ಕಾಂನಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಸಮರ್ಪಕವಾಗಿಲ್ಲ. ಮೂಡಿಗೆರೆ ಮೆಸ್ಕಾಂನಿಂದ ಬಿಲ್ ಬರುತ್ತಿದೆ. ಅವ್ಯವಸ್ಥೆ ಬಗ್ಗೆ ಕೇಳಿದರೆ ಒಬ್ಬರ ಮೇಲೊಬ್ಬರು ಗೂಬೆ ಕೂರಿಸಿ ದೂರುಗಳನ್ನು ಹೇಳುತ್ತಿದ್ದಾರೆ. ಇವರ ನಡುವೆ ಈ ಭಾಗದ ಕೂಲಿ ಕಾರ್ಮಿಕರು ಬಡವಾಗಿಹೋಗಿದ್ದಾರೆ ಎಂದು ದೂರಿದರು.
ಜಿಲ್ಲಾಕೇಂದ್ರ ದಿಂದ ಆಗಮಿಸಿದ್ದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ನಾಗೇಶ್ ಗ್ರಾಹಕರ ಸಮಸ್ಯೆಗಳಿಗೆ ಉತ್ತರ ನೀಡಿ, ಜಯಪುರ ಮೆಸ್ಕಾಂ ಕೇಂದ್ರಕ್ಕೆ ಅಗತ್ಯ 20 ಸಿಬ್ಬಂದಿ ಒದಗಿಸಲು ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು. ಜಯಪುರದಿಂದ ಬಸ್ರೀಕಟ್ಟೆಗೆ ಕಾಡಿನ ನಡುವೆಯಿರುವ ವಿದ್ಯುತ್ ಲೈನ್ ಬದಲಿಸಿ ರಸ್ತೆ ಮಾರ್ಗದಲ್ಲಿ ಎಳೆಯಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ನಿರಂತರ ವಿದ್ಯುತ್ ಪೂರೈಕೆಗೆ ಪ್ರಯತ್ನಿಸಲಾಗುವುದು ಎಂದರು.
ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೋಪಾಲಕೃಷ್ಣ, ಜಯಪುರ ಕೇಂದ್ರದ ಕಿರಿಯ ಎಂಜಿನಿಯರ್ ರವಿಕುಮಾರ್, ಜಯಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯರಾದ ವಿಜಕುಮಾರ್, ಪ್ರಶಾಂತ್ ಶೆಟ್ಟಿ, ವನಿತ, ತಾಪಂ ಮಾಜಿ ಸದಸ್ಯೆ ಸೀತಾಲಕ್ಷ್ಮಿ, ಕಸ್ತೂರ್ ಬಾ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ, ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಸಭೆಯಲ್ಲಿ ಸೇರಿದ್ದರು.