ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ

Vishwanath S
Updated On : 19 Jun 2013, 12:29 pm

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.18
ಬಡತನ ದೂರವಾಗಬೇಕಾದರೆ ಶಿಕ್ಷಣ ಒಂದೇ ದಾರಿ. ಪೋಷಕರು ಎಷ್ಟೇ ಆರ್ಥಿಕ ತೊಂದರೆ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಕರೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಆಯ್ಕೆಗೊಂಡಿರುವ ಸಚಿವರು ಮತ್ತು ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಉನ್ನತಿಗಾಗಿ ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ರೂಪಿಸಬೇಕು. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಪಣ ತೊಡಬೇಕು. ಕುಟುಂಬದಲ್ಲಿ ಎಷ್ಟೇ ತೊಂದರೆಗಳಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಿ. ಅವರು ಪಡೆಯುತ್ತಿರುವ ಶಿಕ್ಷಣದ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.
ತಾಳ್ಮೆ ಅಗತ್ಯ: ತಾಳ್ಮೆಯಿಂದ ಜೀವನ  ನಡೆಸಬೇಕು. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಜೀವನ ನಡೆಸುತ್ತಿರುವ ಬ್ಯಾರಿ ಸಮುದಾಯವರು ಹಿರಿಯರ ಮಾರ್ಗದರ್ಶನದಲ್ಲಿ  ಮುನ್ನಡೆಯಬೇಕು. ಸಮಸ್ಯೆಗಳು ಸ್ವಾಭಾವಿಕ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಬ್ಯಾರಿಗಳು, ಇಂದು ಮಲೆನಾಡು ಸೇರಿದಂತೆ ಹಲವೆಡೆ ಜೀವನ ನಡೆಸುತ್ತಿದ್ದಾರೆ ಎಂದು ತಮ್ಮ ಬಾಲ್ಯದ ಜೀವನವನ್ನು ನೆನಪು ಮಾಡಿಕೊಂಡರು.
ಪ್ರಾಮಾಣಿಕ ಸೇವೆ: ನನಗೆ ನಮ್ಮ ಜನಾಂಗದ ಓಟಿನ ಬಲ ಇಲ್ಲ. ನನಗೆ ಧೈರ್ಯ ತುಂಬಿದವರು ಬ್ಯಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ನೀಡಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮವನ್ನಾಗಿ ದುಡಿಯುತ್ತೇನೆ. ಜನರ ನಡುವೆ ಇದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಶಾಸಕರಾದ ಸಿ.ಟಿ. ರವಿ, ಬಿ.ಬಿ. ನಿಂಗಯ್ಯ, ಬಿ.ಎಂ. ಮೋದಿನ್ ಬಾವಾ, ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗಡೆ ಮಾತನಾಡಿದರು. ತರೀಕೆರೆ ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಗಾಯಿತ್ರಿ ಶಾಂತೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎ. ಹಸನಬ್ಬ, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಬಿ.ಎ. ಮಹಮದ್, ಹನೀಫ್, ಮೂನಿಯರ್ ಅಹಮದ್, ಶಾಂತೇಗೌಡ, ಎಸ್.ಎಲ್. ಬೋಜೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement