'ಸರ್ಕಾರಿ ಶಾಲೆಗಳನ್ನು ಮರೆಯದಿರಿ'
ಮೂಡಿಗೆರೆ, ಜೂ.18 ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದಕ್ಕೆ ಸರ್ಕಾರ ಹೊಣೆಯಲ್ಲ. ಬದಲಿಗೆ ಆಂಗ್ಲ ಶಾಲೆಗಳ ನಡುವಿನ ಪೈಪೋಟಿಯಿಂದಾಗಿ ಸರ್ಕಾರಿ ಶಾಲೆಗಳನ್ನು ಪ್ರತಿಯೊಬ್ಬರೂ ಮರೆಯುತ್ತಿರುವುದೇ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರ ಜೈನ್ ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರದಲ್ಲಿ ಸನ್ಮಾನ ಸಮಾರಂಭಕ್ಕೆ ಆಗಮಿಸುತ್ತಿದ್ದ ಅವರು ಮೂಡಿಗೆರೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಶಾಲೆ ಶಿಕ್ಷಕರ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬುವುದು ತೋರಿಸಲಿ ಅಷ್ಟೆ ಅಲ್ಲದೆ ಜನ ಸಾಮಾನ್ಯರು ಆಂಗ್ಲಭಾಷೆಯ ವ್ಯಾಮೋಹಕ್ಕೆ ತುತ್ತಾಗಿ ಅವರು ಕೇಳಿದಷ್ಟು ಡೊನೇಷನ್ ನೀಡುತ್ತಾ, ಖಾಸಗಿ ಶಾಲೆಗೆ ಸೇರಿಸುವ ಹಂಬಲದಿಂದ ಸರ್ಕಾರಿ ಶಾಲೆಗಳನ್ನು ಅಸಡ್ಡೆ ಮಾಡುತ್ತಿದ್ದಾರೆ ಎಂದರು.
ಮಲೇನಾಡಿನಲ್ಲಿ ಪ್ರಮುಖ ಸಮಸ್ಯೆಗಳಾದ ಇನಾಂ ಭೂಮಿ, ಒತ್ತುವರಿ ತೆರವು, ಡೀಮ್ಡ್ ಫಾರೆಸ್ಟ್ ಸಮಸ್ಯೆಗಳು ಉದ್ಭವವಾಗಿದ್ದು, ಸದ್ಯದಲ್ಲೇ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ತಿಳಿಸಿದರು.
ಒಕ್ಕಲೆಬ್ಬಿಸುವುದಿಲ್ಲ: ತೆರವು ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸುವುದರೊಂದಿಗೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಆನೆ ಹಾವಳಿ ನಿಯಂತ್ರಣದ ಬಗ್ಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು. ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರೊಂದಿಗೆ ಮಾತನಾಡಿ, ಕೊರತೆ ನೀಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಜಿ.ಎಚ್. ಹಾಲಪ್ಪಗೌಡ, ಬಿ.ಎನ್. ಚಂದ್ರಪ್ಪ, ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಮುಖಂಡರಾದ ಹಮ್ಮಬ್ಬ, ಮೊಹಿದ್ದೀನ್, ಮದೀಶ್, ಸುಬ್ರಹ್ಮಣ್ಯ, ಮೊಯಿದ್ದೀನ್ ಶೇಠ್, ಲತೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.