ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಲಂಕಾರದ ಗೊಂಬೆ ಆಗದಿರಿ

Lingaraj Badiger
Updated On : 20 Jun 2013, 10:55 am

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಜೂ. 19
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಸಚಿವ ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು.
ಪ್ರಥಮ ಸಭೆಯ ಆರಂಭದಲ್ಲಿ ಸಂಪ್ರದಾಯದಂತೆ ನೂತನ ಸಚಿವರಿಗೆ ಅಭಿನಂದನೆ, ಒಂದಿಷ್ಟು ಸಲಹೆಗಳ ಮಾತುಗಳು ಕೇಳಿ ಬಂದವು.
ನೂತನ ಸರ್ಕಾರದಲ್ಲಿ ನಮ್ಮ ಜಿಲ್ಲೆಯವರೆ ಸಚಿವರಾಗಬೇಕಾಗಿತ್ತು ಆದರೆ, ಅದು ಸಾಧ್ಯವಾಗಲಿಲ್ಲ. ಮಂಗಳವಾರ ಆರೋಗ್ಯ ಸಚಿವರು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಆ ಸಭೆಗೆ ಆಹ್ವಾನ ನೀಡಿಲ್ಲ. ಕನಿಷ್ಟಪಕ್ಷ ಮಾಹಿತಿಯೂ ಇರಲಿಲ್ಲ. ಇದು, ನಮ್ಮ ಹಕ್ಕಿನ ಬಗ್ಗೆ ಕೇಳುತ್ತಿದ್ದೇನೆ.
ನೀವು ಯಶಸ್ವಿ ಸಚಿವರಾಗಿ ಎಂದು ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಅಭಿನಂದಿಸಿದರು. ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿ ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಕಿವಿ ಮಾತು ಹೇಳಿದರು.
ದ್ವೇಷದ ರಾಜಕಾರಣ ಕಡಿಮೆ: ಶಾಸಕ ಸಿ.ಟಿ. ರವಿ ಮಾತನಾಡಿ, ರಾಜಕೀಯ ಸ್ಥಿತ್ಯಂತರದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಂಚಿತವಾಗಿದೆ. 2004 ರಿಂದ 9 ವರ್ಷಗಳ ಕಾಲ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೆ, ಕೊನೆ ಗಳಿಗೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿತ್ತು. ನಮ್ಮ ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳನ್ನು ಅರ್ಥ ಮಾಡಿಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ.  ನಮ್ಮ ಜಿಲ್ಲೆಯಲ್ಲಿ ವೈಯಕ್ತಿಕ ದ್ವೇಷದ ರಾಜಕಾರಣ ಕಡಿಮೆ. ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.
ಸಾಂಪ್ರದಾಯಿಕ ವ್ಯರ್ಥ ಕಸರತ್ತು: ಕಡೂರು ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಕ್ಕೆ ತಮಗೆ ಅಭಿನಂದನೆಗಳು, ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಪ್ರಕ್ರಿಯೆ ಇದೊಂದು ಸಾಂಪ್ರದಾಯಿಕ ವ್ಯರ್ಥ ಕಸರತ್ತು ಮತ್ತು ಅಲಂಕಾರದ ಗೊಂಬೆ ಎಂಬ ಭಾವನೆ ಬಂದಿದೆ ಎಂದು ದತ್ತ ಹೇಳುತ್ತಿದ್ದಂತೆ ಸಚಿವರು ಮಧ್ಯ ಪ್ರವೇಶಿಸಿ, ಹಿಂದಿನ ಸರ್ಕಾರ ಇದೇ ಮಾಡಿದ್ದು ಎಂದು ಹೇಳಿ ಸುಮ್ಮನಾದರು. ಆಗ ದತ್ತ ತಮ್ಮ ಮಾತನ್ನು ಮುಂದುವರೆಸಿ ನೀವು ಅಲಂಕಾರದ ಗೊಂಬೆ ಆಗುವುದು ಬೇಡ, ಅನುಷ್ಟಾನದ ಸಿಪಾಯಿಗಳಾಗಿ ಎಂದರು.
ಹೆಚ್ಚಿನ ಅನುದಾನ ನೀಡಿ: ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗುವ ಸಂದರ್ಭದಲ್ಲಿ ಕಡೂರು ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಡಾ. ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ಕಡೂರು ಹಿಂದುಳಿದ ತಾಲೂಕು, ಇಲ್ಲಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ದತ್ತ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿದರು.
ಶಾಸಕರ ಅಭಿನಂದನೆ ಹಾಗೂ ಸಲಹೆಗಳನ್ನು ಆಲಿಸಿದ ಸಚಿವ ಅಭಯಚಂದ್ರ ಜೈನ್ ನಂತರದಲ್ಲಿ ಮಾತನಾಡಿ, ದತ್ತನಷ್ಟು ವಾಕ್ಚಾತುರ್ಯ ನನಗಿಲ್ಲ. ನಾನು ದೊಡ್ಡ ಸಮಾಜ ಸುಧಾಕರನಲ್ಲ. ಜನರ ಸೇವೆ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ನಾವೆಲ್ಲರೂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ರಾಜಕೀಯ ಅಸ್ತ್ರ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನದ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮಾಹಿತಿ ನೀಡಿ, ಈ ಯೋಜನೆಯಡಿ ಯಂತ್ರ ಬಳಸಿ ಕಾಮಗಾರಿ ನಿರ್ವಹಿಸಿದ ಕಾರಣರಾದವರಿಂದ ಹಣ ವಸೂಲಿ ಮತ್ತು ಹಣ ದುರುಪಯೋಗದ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಿದರು.
ಜಿಲ್ಲೆಯ 7 ತಾಲೂಕಿನಲ್ಲಿ 72 ಪ್ರಕರಣಗಳು ದಾಖಲಾಗಿದ್ದು, 44.21 ಲಕ್ಷ ವಸೂಲಿ ಮಾಡಬೇಕಾಗಿದ್ದು, ಈ ಪೈಕಿ ಈವರೆಗೆ 14.47 ಲಕ್ಷ ವಸೂಲಿ ಮಾಡಲಾಗಿದೆ. ಇನ್ನು 29.73 ಲಕ್ಷ ಬಾಕಿ ಇದೆ. ಬಾಕಿ ಇರುವ 3.98 ಲಕ್ಷ ಮೊತ್ತವನ್ನು ವಸೂಲಾತಿಗೆ ತಡೆ ಕೋರಿ 2 ಅರ್ಜಿಗಳು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಒಂದೇ ಮಾನದಂಡದಡಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ದೊಡ್ಡ ಪಂಚಾಯ್ತಿಗಳಲ್ಲಿ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಹಣ ಸಾಕಾಗುತ್ತಿಲ್ಲ. ಅದುದ್ದರಿಂದ ಜನಸಂಖ್ಯೆಯ ಆಧಾರದ ಮೇಲೆ ಅನುದಾನ ನೀಡಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಸಲಹೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರದ ಹುತ್ತ. ಕಡೂರು ಕ್ಷೇತ್ರದಲ್ಲಿ ರಾಜಕೀಯ ದ್ವೇಷ ಸಾಧಿಸಲು ಇದೊಂದು ಅಸ್ತ್ರವಾಗಿದೆ. ಇದನ್ನು ತಡೆಯುವ ಕೆಲಸ ಆಗಬೇಕು ಎಂದು ವೈಎಸ್‌ವಿ ದತ್ತ ಹೇಳಿದರು.
ಕೆಮ್ಮಣ್ಣುಗುಂಡಿ ವಿಹಾರಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯ ಚರ್ಚೆಗೆ ಬಂದಾಗ ಡಿಎಫ್‌ಓ ಕೆ. ಉದುಪುಡಿ ಮಾತನಾಡಿ, ಆ ಪ್ರದೇಶದಲ್ಲಿ ರಸ್ತೆ ಅಗಲೀಕರಣಕ್ಕೆ, ಅಭಿವೃದ್ಧಿಗೆ, ಕಾಂಕ್ರಿಟ್ ರಸ್ತೆಗೆ ಅವಕಾಶ ಇಲ್ಲ. ಆದರೆ, ದುರಸ್ತಿಗೆ ಅವಕಾಶ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement