ಡೆಂಘೀಗೆ ಬಲಿ: ಪರಿಹಾರಕ್ಕೆ ಸಚಿವರ ಸೂಚನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.19
ಡೆಂಗ್ಯೂ ಜ್ವರದಿಂದ ಮೃತಪಟ್ಟ ಯುವಕನ ಮನೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಂಗಳವಾರ ರಾತ್ರಿ ಭೇಟಿ ನೀಡಿದ್ದರು.
ಕಡೂರು ತಾಲೂಕಿನ ದೇವನೂರು ಸಮೀಪದ ಗುಣಸಾಗರ ನಿವಾಸಿ ಲಕ್ಷ್ಮಣ (27) ಎಂಬುವವರು ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದು, ಸಚಿವರು ಗ್ರಾಮದಲ್ಲಿ ಮೃತನ ಪತ್ನಿ, ತಾಯಿ ಮತ್ತು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಮೃತನ ಕುಟುಂಬದವರಿಗೆ ಪರಿಹಾರ ನೀಡಲು ಅನುಕೂಲವಾಗುವಂತೆ ಕೂಡಲೇ ಸರಕಾರಕ್ಕೆ ವರದಿ ಕಳುಹಿಸುವಂತೆ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ರಕ್ತ ಪರೀಕ್ಷೆ ಮಾಡಿಸಿ: ಬಳಿಕ ಮಾತನಾಡಿದ ಸಚಿವ ಯು.ಟಿ. ಖಾದರ್, ಯಾವುದೇ ಜ್ವರದ ಲಕ್ಷಣ ಕಂಡು ಬಂದಲ್ಲಿ ರಕ್ತದ ಪರೀಕ್ಷೆ ನಡೆಸಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ವಿಳಂಭಿಸದೇ ಉನ್ನತ ಆಸ್ಪತ್ರೆಗಳಿಗೆ ಕಳುಹಿಸಬೇಕು. ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಸಾಂಕ್ರಾಮಿಕ ರೋಗ ಪೀಡಿತರ ಮಾಹಿತಿ ಆರೋಗ್ಯ ಇಲಾಖೆಗೆ ತಕ್ಷಣವೇ ಸಿಗುವಂತೆ ಕ್ರಮ ವಹಿಸಬೇಕು. ರೋಗ ಪೀಡಿತರನ್ನು ಅನಗತ್ಯವಾಗಿ ಬೇರೆ ಜಿಲ್ಲೆಗಳಿಗೆ ಚಿಕಿತ್ಸೆಗೆ ಕಳುಹಿಸದಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮೃತನ ಪತ್ನಿಗೆ ಸೂಕ್ತ ಉದ್ಯೋಗ ದೊರಕಿಸಿಕೊಡಲು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛತೆ ಕಾಪಾಡಿ: ಬಳಿಕ ಗುಣಸಾಗರ ಗ್ರಾಮಸ್ಥರೊಂದಿಗೆ ಸಮಲೋಚಿಸಿದ ಸಚಿವ ಯು.ಟಿ. ಖಾದರ್ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಮನವಿ ಮಾಡಿದರು. ಯಾವುದೇ ಜ್ವರದ ಲಕ್ಷಣ ಕಂಡುಬಂದಲ್ಲಿ, ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು, ಕುಡಿಯುವ ನೀರನ್ನು ಶುದ್ದೀಕರಿಸಿ ಕುಡಿಯಬೇಕು ಎಂದು ತಿಳಿಸಿದರು.
ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರಕಾರದ ವಿಳಂಭವನ್ನು ಸಹಿಸುವುದಿಲ್ಲ ಮತ್ತು ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಖಾದರ್ ತಿಳಿಸಿದರು.
ಡೆಂಘೀ ಜ್ವರದಿಂದ ಮೃತಪಟ್ಟ ಯುವಕನ ಮನೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಂಗಳವಾರ ರಾತ್ರಿ ಭೇಟಿ ನೀಡಿದ್ದರು.