ತರೀಕೆರೆ ತಾಲೂಕು ಅಭಿವೃದ್ಧಿಗೆ ಆದ್ಯತೆ
ಕ.ಪ್ರ.ವಾರ್ತೆ ತರೀಕೆರೆ ಜೂ.19
ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾವು ಆದ್ಯತೆ ನೀಡುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಅವರು, ಬುಧವಾರ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ, ಲಿಂಗದಹಳ್ಳಿ ಗ್ರಾಮಸ್ಥರು ವತಿಯಿಂದ ಏರ್ಪಡಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಾರ್ವಜನಿಕರು ನೇರವಾಗಿ ತಮ್ಮ ಬಳಿ ಬರಬಹುದು, ಯಾವುದೇ ರೀತಿಯ ಶಿಫಾರಸ್ಸು ಅಗತ್ಯವಿಲ್ಲ. ಎಲ್ಲರ ಕೆಲಸ ಕಾರ್ಯಗಳನ್ನು ಗಮನ ಹರಿಸಿ ಖಂಡಿತ ಮಾಡಿಕೊಡುವ
ಪ್ರಯತ್ನ ಮಾಡುತ್ತೇನೆ. ತಾಲೂಕಿನ ಅಭಿವೃದ್ದಿ ವಿಚಾರವಾಗಿ ಎಲ್ಲ ಸಚಿವರಿಗೂ ಪತ್ರ ಬರೆದಿದ್ದೇನೆ, ತಾಲೂಕಿನ ಸಮಗ್ರ ಅಭಿವೃದ್ದಿಗೆ ಆದ್ಯ ಗಮನ ನೀಡುತ್ತೇನೆ ಎಂದು ಅವರು ತಿಳಿಸಿದರು.
ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ನಿಂದ ಲಿಂಗದಹಳ್ಳಿಯ ದೊಡ್ಡಕರೆಗೆ ನೀರು ಹರಿಸಲು ತಾವು ಪ್ರಯತ್ನಿಸುವುದಾಗಿ ತಿಳಿಸಿದ ಅವರು ವಾರದೊಳಗಾಗಿ ಜಂಬದಹಳ್ಳ ಜಲಾಶಯ ಯೋಜನೆಗೆ ಕಾಮಗಾರಿಗೆ ಟೆಂಡರ್ ಕರೆಯುವ ವ್ಯವಸ್ಥೆಯಾಗುತ್ತಿದೆ ಎಂದರು.
ಶೀಘ್ರದಲ್ಲೇ ಭೀಮನಹಳ್ಷ ಯೋಜನೆ, ಬುಕ್ಕಾಂಬುದಿ ಗಾಣಗಿತ್ತಿ
ಕೆರೆ ಯೋಜನೆಗಳನ್ನು ಕಾರ್ಯವನ್ನು ಕೈಗೊಳ್ಳಲಾಗುವುದು, ಅಲ್ಲದೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಶಿವನಿ ಮತ್ತು ಕುಡ್ಲೂರು ಗ್ರಾಮಗಳಿಗೂ ನೀರು ಒದಗಿಸಲಾಗುವುದು.
ಸಮಗ್ರ ತಾಲೂಕನ್ನು ನೀರಾವರಿ ಮಾಡುವ ಹಿನ್ನೆಲೆಯಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಬಳಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿದ್ಯುತ್ ಸಮಸ್ಯೆ: ಲಿಂಗದಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಗುಳ್ಳದಮನೆ ರಾಮಚಂದ್ರಪ್ಪ ಅವರು ಮಾತನಾಡಿ ಲಿಂಗದಹಳ್ಳಿ ಹೋಬಳಿ ಎಂಯುಎಸ್ಎಸ್ ವಿದ್ಯುತ್ ಸರಬರಾಜು ಇದ್ದು ಅದು ಸಾಕಾಗುವುದಿಲ್ಲ ಆದುದರಿಂದ 6.3 ಬದಲಿಗೆ 12.5 ವಿದ್ಯುತ್ ಪ್ರಮಾಣವನ್ನು ನಿಗದಿ ಪಡಿಸಬೇಕೆಂದು ಅವರು ಮನವಿ ಮಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಜಯರಾಂ ಅವರು ಮಾತನಾಡಿ ಸಂಧ್ಯ ಸುರಕ್ಷಾ, ಅಂಗವಿಕಲರ ವೇತನ ಇತ್ಯಾದಿ ವಿವಿಧ ಬಗೆಯ ವೇತನಗಳನ್ನು ಮಂಜೂರು ಮಾಡಿಸಿಕೊಡಬೇಕು, ಲಿಂಗದಹಳ್ಳಿಗೆ ಶುದ್ದ ಕುಡಿಯುವ ನೀರಿನ ಅಗತ್ಯವಿದೆ, ಪಿಳ್ಳಯ್ಯನ ಕೆರೆಗೆ ಕಲ್ಲತ್ತಿಗಿರಿ ಫಾಲ್ಸ್ನಿಂದ ಏತ ನೀರಾವರಿ ಮೂಲಕ ನೀರು ಒದಗಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಜಿ.ಪಂ.ಮಾಜಿ ಸದಸ್ಯ ಶಾಂತವೀರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖಂಡರಾದ ಶಿವಣ್ಣ ಮತ್ತಿತರರು ಮಾತನಾಡಿದರು. ಲಿಂಗದಹಳ್ಳಿ ಗ್ರಾಮಸ್ಥರ ಪರವಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಶಿವಣ್ಣ,, ಜಿ.ಪಂ.ಸದಸ್ಯ ಹೇಮಾವತಿ ಕೃಷ್ಣಪ್ಪ, ಗ್ರಾ.ಪಂ.ಅಧ್ಯಕ್ಷೆ ಜಂದ್ರೀಬಾಯಿ, ಮತ್ತತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.