ರೇಲ್ವೆ ನಿಲ್ದಾಣದಲ್ಲೂ ಮಳೆ ಕೊಯ್ಲು
ಕ.ಪ್ರ.ವಾರ್ತೆ ಬೀರೂರು ಜೂ.13 ರೈಲ್ವೆ ಇಲಾಖೆಯು ಕೇವಲ ಪ್ರಯಾಣಿಕರ ಹಿತವನ್ನಲ್ಲದೇ ಪರಿಸರಿದ ಬಗ್ಗೆಯೂ ಕಾಳಜಿ ವಹಿಸುತ್ತಿದೆ ಎಂದು ನೈಋುತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನೋದ್ ಕುಮಾರ್ ಹೇಳಿದರು.
ಅವರು ಬೀರೂರು ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಅರಸೀಕೆರೆ ಬೀರೂರು ನಿಲ್ದಾಣಗಳ ವಸತಿ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ ಎಂದರು.
ಮಳೆ ಕೊಯ್ಲು: ಹೊಸದಾಗಿ ನಿರ್ಮಿಸುತ್ತಿರುವ ಎಲ್ಲ ರೈಲ್ವೆ ನಿಲ್ದಾಣಗಳಲ್ಲೂ ಮಳೆ ಕೊಯ್ಲು ಪದ್ದತಿಯನ್ನು ಅಳವಡಿಸಲಾಗುತ್ತಿದ್ದು ಇದರ ಜೊತೆ ಮಳೆಗಾಲದಲ್ಲಿ ಮಳೆ ನೀರು ಶೇಖರಿಸಿ ಮರು ಬಳಕೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ರೈಲ್ವೆ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಭಗವತ್ ನಗರದ ಪ್ರದೇಶಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಪ್ರವೇಶ ಹಾಗು ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ಕೂಡ ಉಪ ವಿಭಾಗಾಧಿಕಾರಿ ಅನುರಾಧಾರವರ ಮನವಿಯಂತೆ ಮೂರು ತಿಂಗಳವರೆಗೆ ಭಗವತ್ ನಗರದ ನಿವಾಸಿಗಳಿಗೆ ತೊಂದರೆಯಾಗದಂತೆ ಓಡಾಟಕ್ಕೆ ರೈಲ್ವೆ ಪ್ರದೇಶದ ಕೊನೆಯ ಭಾಗದಲ್ಲಿ ಸ್ಥಳ ಬಿಟ್ಟುಕೊಡುತ್ತಿದ್ದು ಆದಷ್ಟು ಶೀಘ್ರವಾಗಿ ಸ್ಥಳೀಯ ಆಡಳಿತವು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು.
ವರದಿಗೆ ಸೂಚನೆ: ಕಡೂರು ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಇರುವುದು ಫ್ಲಾಟ್‌ಫಾರಂ ಬಿರುಕು ಬಿಟ್ಟಿರುವ ಬಗ್ಗೆ ಹಾಗು ಸಂಪರ್ಕ ರಸ್ತೆಯು ಕಳಪೆ ಕಾಮಗಾರಿ ಹಾಗು ಕಡೂರು ರೈಲ್ವೆ ನಿಲ್ದಾಣದಲ್ಲಿ ಕೆಲವು ರೈಲು ಗಾಡಿಗಳ ನಿಲುಗಡೆ ಬಗ್ಗೆ ರೈಲ್ವೆ ಸಲಹಾ ಮಂಡಳಿ ಸದಸ್ಯ ಕೆ. ವಿನಯ ಕುಮಾರ್ ಪ್ರಶ್ನಿಸಿದಾಗ, ಕೂಡಲೇ ಸಂಬಂದಪಟ್ಟ ಅಧಿಕಾರಿ ತಿರುಮಲ ಅವರನ್ನು ಕರೆದು ಇನ್ನು ನಾಲ್ಕು ದಿನಗಳಲ್ಲಿ ಸದಸ್ಯರೊಂದಿಗೆ ಈ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಸೂಚಿಸಿದ್ದಲ್ಲದೆ ರೈಲು ಗಾಡಿಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ಸಹಾಯಕ ವ್ಯವಸ್ಥಾಪಕ ಡಾ ರಾಕೇಶ್ ಗುಪ್ತ, ಹಿರಿಯ ವಾಣಿಜ್ಯ ಪ್ರಭಂದಕ,ಕೆ. ಅನಿಲ್ ಕುಮಾರ್, ಹಿರಿಯ ಅಭಿಯಂತರ ಬಿ.ಕಾಶಿವಿಶ್ವನಾಥ್, ಇ. ಶ್ರೀನಿವಾಸ್, ಸಿ.ಎಂ. ರಂಗನಾಥ್, ಬೀರೂರು ನಿಲ್ದಾಣ ವ್ಯವಸ್ಥಾಪಕ ನಂದಕುಮಾರ್, ವಾಣಿಜ್ಯ ನಿರೀಕ್ಷಕ ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.
--