ಸಿಂಗ್ ವರದಿ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಿ
ಕ.ಪ್ರ.ವಾರ್ತೆ ಸಾಗರ ಜೂ.19 ಗೋರಕ್ ಸಿಂಗ್ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿ ಬುಧವಾರ ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘದಿಂದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅಡಕೆ ಬೆಳೆಯನ್ನು ಬಾಧಿಸುತ್ತಿರುವ ಸಮಸ್ಯೆ ಕುರಿತು ವರದಿ ನೀಡುವಂತೆ ಡಾ. ಗೋರಕ್ ಸಿಂಗ್ ಸಮಿತಿಯನ್ನು ನೇಮಿಸಿತ್ತು.
ಸಮಗ್ರ ವರದಿ: ಗೋರಕ್ ಸಿಂಗ್ ನೇತೃತ್ವದ ತಜ್ಞರ ಸಮಿತಿ ಈ ಭಾಗಗಳಲ್ಲಿ ಸಂಚರಿಸಿ ಅಡಕೆಗೆ ಬಾಧಿಸುತ್ತಿರುವ ಹಳದಿ ಎಲೆ ರೋಗ, ಕೊಳೆರೋಗ ಇನ್ನಿತರ ಸಮಸ್ಯೆ ಕುರಿತು ಸಮಗ್ರ ವರದಿ ತಯಾರಿಸಿದೆ.
ಡಿಸೆಂಬರ್ 2009ರಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ 4 ಹೆಕ್ಟೇರ್‌ವರೆಗಿನ ಅಡಕೆ ಬೆಳೆಗಾರರ ಸಾಲಮನ್ನಾ ಮಾಡುವಂತೆ ಹಾಗೂ ಮರುಸಾಲ ನೀಡುವ ಬಗ್ಗೆ, ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಸೇರಿದಂತೆ ಅನೇಕ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುತ್ತದೆ. ಆದರೆ ಈವರೆಗೂ ವರದಿ ಅನುಷ್ಠಾನಕ್ಕೆ ಬಂದಿಲ್ಲ.
ಈಗಾಗಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಜಾರಿಗೊಳಿಸಲಾಗಿದ್ದು, ಇದರಿಂದ ಅಡಕೆ ಧಾರಣೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹಿಂದಿನ ರಾಜ್ಯ ಸರ್ಕಾರ ಅಡಕೆ ಬೆಳೆಗಾರರ ಹಿತ ಕಾಪಾಡುವ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ.
ಈ ನಿಟ್ಟಿನಲ್ಲಿ ಈಗಿನ ಸರ್ಕಾರದ ವತಿಯಿಂದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 4 ಹೆಕ್ಟೇರ್ ವರೆಗಿನ ರಾಷ್ಟ್ರೀಯ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಅಡಕೆ ಬೆಳೆಗಾರರು ಪಡೆದಿರುವ ಸಾಲ ಮನ್ನಾ ಹಾಗೂ ಇತರ ಸಂಕಷ್ಟಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಡಾ. ಗೋರಕ್‌ಸಿಗ್ ವರದಿ ಪರಿಪೂರ್ಣ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗಡೆ, ಉಪಾಧ್ಯಕ್ಷ ಬಿ.ಎಂ. ಸುಂದರೇಶ್, ಷಡಾಕ್ಷರಿ, ಕಾರ್ಯದರ್ಶಿ ಎಸ್.ಎಂ. ರವಿರಾಜ ಹೆಬ್ಬಾರ್, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ, ಜಿ.ವಿ. ಅನಂತ್, ಶಶಿಧರ್, ಸುಬ್ಬಣ್ಣ ಪಡವಗೋಡು, ವೀರೇಶ್ ಬರೂರು, ರವಿ ಜಂಬೂರುಮನೆ, ಹೂವಣ್ಣ ಹುರಳಿ ಹಾಜರಿದ್ದರು.