ಖರ್ಗೆಯವರ ಮುಂದಿದೆ ಕಡೂರಿನ ಸವಾಲುಗಳು
ಕಡೂರು: ಹಿಂದುಳಿದ ಸಮುದಾಯದ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೇಂದ್ರದ ರೈಲ್ವೆ ಸಚಿವರಾಗಿ ಆಯ್ಕೆ ಮಾಡಿರುವುದು ಶೋಷಿತ ವರ್ಗಗಗಳಿಗೆ ಸಿಕ್ಕ ಸಾಮಾಜಿಕ ನ್ಯಾಯವಾಗಿದ್ದು, ಕಡೂರಿನಿಂದ ಸ್ಥಳಾಂತರಿಸಲು ನಿರ್ಧರಿಸಿರುವ ರೈಲ್ವೆ ಗೂಡ್ಸ್ ಶೆಡ್‌ನ್ನು ಕಡೂರು ಸಮೀಪದಲ್ಲಿಯೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಆಗ್ರಹಿಸಿದ್ದಾರೆ.
ಹೇಳಿಕೆ ನೀಡಿರುವ ಅವರು, ನೂತನ ಸಚಿವರು ಕಡೂರು ರೈಲ್ವೆ ನಿಲ್ದಾಣದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಿದೆ. ಪಟ್ಟಣದ ರೈಲ್ವೆ ನಿಲ್ದಾಣವನ್ನು ಜಂಕ್ಷನ್ ಮಾಡುವ ಕನಸು ಕನಸಾಗಿಯೇ ಉಳಿದಿದೆ. ಪ್ರತಿದಿನ ಕಡೂರು ಮುಖಾಂತರ ಓಡಾಡುವ ಹಲವಾರು ಎಕ್ಸಪ್ರೆಸ್ ರೈಲುಗಳನ್ನು ಪಟ್ಟಣದಲ್ಲಿ ನಿಲುಗಡೆ ಮಾಡಲು ಸಚಿವರು ಕ್ರಮ ಕೈಗೊಳ್ಳಬೇಕು. ಅಲ್ಲದೆ ಬೆಳಿಗ್ಗೆ 6 ಗಂಟೆಯಿಂದ ಸುಮಾರು 11 ಗಂಟೆವರೆಗೆ ಕಡೂರು ಮುಖಾಂತರ ಹಲವಾರು ರೈಲುಗಳು ಹಾದು ಹೋಗುವಾಗ ಕಡೂರು ಕೋಟೆಯ ರೈಲ್ವೆ ಗೇಟ್ ಪದೇಪದೇ ಮುಚ್ಚುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ರೈತರಿಗೆ ತೊಂದರೆಯಾತ್ತಿರುವುದರಿಂದ ಕೆ.ಎಂ. ರಸ್ತೆಯ ಕಡೂರಿನ ಹಳೇಸಂತೆ ಮೂಲಕ ಅಂಡರ್ ಪಾಸ್ ಮಾಡಿ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರ ರಸ್ತೆಗೆ ಸಂಪರ್ಕ ರಸ್ತೆ ಕಲ್ಪಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಗೂಡ್ಸ್ ಶೆಡ್ ಸ್ಥಲಾಂತರ ಬೇಡ: ಗೂಡ್ಸ್ ಶೆಡ್‌ನ್ನು ಬಳ್ಳೇಕೆರೆಯಿಂದ ಚಿಕ್ಕಮಗಳೂರಿಗೆ ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದ್ದು, ಅದನ್ನು ಕಡೂರು ಸಮೀಪದ ಬಳ್ಳೇಕೆರೆ ಅಥವಾ ನಿಲ್ದಾಣಕ್ಕೆ ಇನ್ನೂ ಹತ್ತಿರವಾಗಿರುವ ಬಂಡಿಕೊಪ್ಪಲು ಬಳಿಯ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಿದಲ್ಲಿ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕಾರ್ಮಿಕರು ಹಾಗೂ ನೂರಾರು ಲಾರಿ ಮಾಲೀಕರು ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಬೀದಿಗೆ ಬೀಳುವ ಸಂಭವ ಇರುವುದರಿಂದ ಸಚಿವರು ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಒತ್ತಾಯಿಸಿದರು.
ಬೀರೂರು ಸಮೀಪದ ಬಿ. ಕೋಡೀಹಳ್ಳಿಗೆ ಹೋಗುವ ರಸ್ತೆಯಲ್ಲಿ ಮಾಡಿರುವ ರೈಲ್ವೆ ಅಂಡರ್ ಪಾಸ್ ಸಮರ್ಪಕವಾಗಿಲ್ಲ ದೇವಾಲಯದ ಮುಂದೆ ಮತ್ತೊಂದು ಅಂಡರ್ ಪಾಸ್ ನಿರ್ಮಾಣ ಮಾಡಿದಲ್ಲಿ ಭಾರೀ ವಾಹನಗಳು ಮತ್ತು ಜನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಖರ್ಗೆಯವರನ್ನು ಕೆಂಪರಾಜು ಒತ್ತಾಯಿಸಿದ್ದಾರೆ.