ಸಾವಯವ ವಸ್ತು ಬಳಸಿ ಪರಿಸರ ಉಳಿಸಿ
ಕಪ್ರ ವಾರ್ತೆ, ಕಡೂರು, ಜೂ. 20
ಕಡೂರು ತಾಲೂಕು ಕುಂಕಾನಾಡಿನ ಧರಿತ್ರಿ ಸಾವಯವ ಕೃಷಿ ಸೇವಾ ಟ್ರಸ್ಟ್, ಕೆ. ಬಸವನಹಳ್ಳಿಯ ಸೃಷ್ಟಿ ಸಮಾಜೋತ್ಥಾನ ಟ್ರಸ್ಟ್, ವಡೇರಹಳ್ಳಿಯ ಸ.ಕಿ.ಪ್ರಾ.ಶಾಲೆ ಮತ್ತು ಕುಂಕಾನಾಡಿನ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ವಡೇರಹಳ್ಳಿಯ ಶಾಲಾ ಆವರಣದಲ್ಲಿ ಸಸಿ ನೆಟ್ಟು ನಂತರ ಉಪನ್ಯಾಸ ನೀಡಿದ ವಿಜ್ಞಾನಿ ಎಚ್.ಎಂ. ಚಂದ್ರಪ್ಪ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಹೆಚ್ಚಾಗಬೇಕಿದೆ. ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ. ಸಾವಯವ ವಸ್ತುಗಳ ಬಳಕೆ ಹೆಚ್ಚಾಗುವ ಮೂಲಕ ರೈತರು ಸಾವಯವ ಕೃಷಿಗೆ ಮರಳಬೇಕು ಎಂದರು.
ರೈತರ ಆಸಕ್ತಿ ಅಗತ್ಯ: ರೈತರು ಈ ಬಗ್ಗೆ ಆಸಕ್ತಿ ವಹಿಸಬೇಕು. ಮನೆ ಬಳಕೆಯಲ್ಲಿ ಪಾತ್ರೆ, ಬಟ್ಟೆ, ಶೌಚಾಲಯ ಶುದ್ಧಗೊಳಿಸಲು ಉಪಯೋಗಿಸುವ ರಾಸಾಯನಿಕ ಮಾರ್ಜಕಗಳ ಬಳಕೆಯಿಂದಾಗುವ ಪರಿಣಾಮ ಗಂಭೀರವಾಗಿದ್ದು, ಇವುಗಳ ಬದಲಿಗೆ ಹಿಂದಿನಿಂದಲೂ ಬಳಸುತ್ತಿದ್ದ ಬೂದಿ, ಹುಣಸೇಹಣ್ಣು ಇತ್ಯಾದಿ ಸಾವಯವ ವಸ್ತುಗಳನ್ನು ಬಳಸುವುದು ಆರೋಗ್ಯದಾಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ಬಸವರಾಜು ಮಾತನಾಡಿ, ಸಾವಯವ ಕೃಷಿ ಪದ್ಧತಿ ದ್ದತಿ ಹಿಂದಿನಿಂದಲೂ ಬಂದಿರುವ ಪದ್ದತಿಯಾಗಿದ್ದು, ಮನುಷ್ಯರು ಆರೋಗ್ಯವಂತರಾಗಿದ್ದರು. ಆದರೆ ಇತ್ತೀಚೆಗೆ ರಾಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ಜನರು ಅರಿಯಬೇಕು ಎಂದರು.
ತಾಪಂ ಅಧ್ಯಕ್ಷ ಎನ್. ಓಂಕಾರಪ್ಪ ಸಸಿ ವಿತರಿಸಿ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಕೆ.ಎಂ. ಬಸವರಾಜಪ್ಪ, ನಿವೃತ್ತ ಶಿಕ್ಷಕ ಆರ್. ಗಂಗಪ್ಪ, ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮೋಹನಕುಮಾರ್, ಗ್ರಾಪಂ ಕಾರ್ಯದರ್ಶಿ ಮಂಜಪ್ಪ, ಧರಿತ್ರಿ ಮತ್ತು ಸೃಷ್ಟಿ ಟ್ರಸ್ಟಿನ ಅಧ್ಯಕ್ಷರು, ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
--
ತರೀಕೆರೆಯಲ್ಲಿ ದಿಂಡಿ ಉತ್ಸವ
ತರೀಕೆರೆ: ಪಟ್ಟಣದ ಭಾವಸಾರ ಕ್ಷತ್ರಿಯ ದೈವ ಮಂಡಳಿ ಭಜನಾ ಮಂಡಳಿಯಿಂದ 26ನೇ ವರ್ಷದ ಶ್ರೀ ವಿಠಲ ರುಕ್ಮಾಯಿಯವರ ದಿಂಡಿ ಉತ್ಸವ ಏರ್ಪಡಿಸಲಾಗಿತ್ತು.
ಶ್ರೀ ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಧ್ವಜಾರೋಹಣ, ಜ್ಞಾನೇಶ್ವರಿ ಗ್ರಂಥದ ಧ್ವಜಾಪೂಜೆ, ಕಾಕಡಾರತಿ, ಶ್ರೀ ದುರ್ಗಮ್ಮನವರಿಗೆ ಎಳನೀರು ಅಭಿಷೇಕ, ಮಹಾಪೂಜೆ ಮತ್ತು ಭಾವಸಾರ ಮಹಿಳಾ ಸ್ವ ಸಹಾಯ ಸಂಘದವರಿಂದ ಶ್ರೀ ಮೈಲಾರಲಿಂಗಸ್ವಾಮಿಯವರಿಗೆ ದೋಣಿಸೇವೆ, ಶ್ರೀ ರುಕ್ಮಾಯಿದೇವಿ ಮತ್ತು ಶ್ರೀ ಪಾಂಡುರಂಗಸ್ವಾಮಿಯವರಿಗೆ ಅಭಿಷೇಕ ಮತ್ತು ಮಹಾಪೂಜೆ, ಶಿರಾ ರಾಮೇಶ್ವರ ಪೋಕಾಳೆ ಅವರಿಂದ ಹರಿಪಾಠ ಭಜನೆ ಮತ್ತು ನಾಮಜಪ ಗಾಜನೂರು ರಾಮಚಂದ್ರರಾವ್ ಉಪನ್ಯಾಸ, ದಾಮೋದರರಾವ್ ಜಿಂಗಾಡೆ ಅವರಿಂದ ಪ್ರವಚನ ಏರ್ಪಡಿಸಲಾಗಿತ್ತು.
ಶಿವಮೊಗ್ಗ ಹನುಮಂತರಾವ್ ರಂಗಧೋಳ್ ಶ್ರೀ ಪಂಡರಿ ಸಾಂಪ್ರದಾಯಕ ಕೀರ್ತನೆ, ಅಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಸೀಮಾ ರಾಯ್ಕರ್ ಅವರಿಂದ ಪಾವೂಲ್ ಭಜನೆ, ಸಂತವಾಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಲಾವಿದ ತುಕಾರಾಮರಾವ್ ರಂಗಧೋಳ್, ವಿಜಯಕುಮಾರ್ ರಂಗಧೋಳ್ ಪಕ್ಕವಾದ್ಯ ನುಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ವಿಠಲ ರುಕುಮಾಯಿಯವರ ರಾಜಬೀದಿ ಉತ್ಸವವನ್ನು ಏರ್ಪಡಿಸಲಾಗಿತ್ತು.
--