ಸ್ಮಾರಕ ಭವನ: ಅನುದಾನ ನೀಡಲು ಜಿಲ್ಲಾ ಕಸಾಪ ಆಗ್ರಹ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.20
್ಙತಾಲೂಕಿನ ಅಂಬಳೆ ಗ್ರಾಮದಲ್ಲಿ ಸಾಹಿತಿ ಡಾ. ಎ.ಆರ್. ಕೃಷ್ಣಶಾಸ್ತ್ರಿಯವರ ಸ್ಮಾರಕ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನದ ಪರಿಷ್ಕೃತ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರಜೈನ್ ಅವರಿಗೆ ಬುಧವಾರ ಕಸಾಪ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಡಾ.ಎ.ಆರ್. ಕೃಷ್ಣಶಾಸ್ತ್ರಿರವರ ಸ್ಮಾರಕ ಭವನ ನಿರ್ಮಾಣಕ್ಕೆ 75 ಲಕ್ಷ ರುಪಾಯಿಯ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ 2010ರಲ್ಲಿ ಸಲ್ಲಿಸಲಾಗಿತ್ತು.
ಇದಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ 50 ಲಕ್ಷ ರುಪಾಯಿ ಮಂಜೂರು ಮಾಡಿತ್ತು. ಅದರಂತೆ ನೀಲ ನಕ್ಷೆ ಸಿದ್ಧಪಡಿಸಲಾಗಿತ್ತು. ಕಾಮಗಾರಿ ಆರಂಭವಾಗುವ ವೇಳೆ ಅಂಬಳೆ ಗ್ರಾಪಂನವರು ಹಿಂದೆ ತೆಗೆದುಕೊಂಡ ತೀರ್ಮಾನದ ಪ್ರಕಾರ ಭೂಮಿ ನೀಡಲು ಸಾಧ್ಯವಿಲ್ಲವೆಂದು ಹೇಳಿ ಕಡಿಮೆ ಅಳತೆಯ ನಿವೇಶನ ನೀಡುವುದಾಗಿ ತಿಳಿಸಿದ್ದರು.
ನಿವೇಶನ ರಗಳೆ: ಆದರೆ, ಆರಂಭದಲ್ಲಿ 150,200 ಅಡಿ ಅಳತೆಯ ನಿವೇಶನ ನೀಡುವುದಾಗಿ ಹೇಳಿ ನಂತರದಲ್ಲಿ ಗ್ರಾಪಂ ತಮ್ಮ ನಿರ್ಧಾರ ಬದಲಾವಣೆ ಮಾಡಿತ್ತು. ಬಳಿಕ ಈ ಹಿಂದೆ ಕೊಟ್ಟ ಭರವಸೆಯಂತೆಯೇ 150,200 ಅಡಿ ಅಳತೆಯ ನಿವೇಶನ ನೀಡುವುದಾಗಿ ಗ್ರಾಪಂನವರು ಹೇಳಿದರು. ಈ ಎಲ್ಲಾ ಬೆಳವಣಿಗೆಗಳಿಗೆ ಸುಮಾರು ಒಂದು ವರ್ಷ ಕಾಲ ವ್ಯಯವಾಯಿತು.
ನಂತರದಲ್ಲಿ 2011-12ನೇ ಸಾಲಿನ ದರಪಟ್ಟಿಗೆ ಅನುಗುಣವಾಗಿ 110 ಲಕ್ಷಕ್ಕೆ ಪರಿಷ್ಕೃತ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈವರೆಗೆ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಿರ್ಲಕ್ಷ್ಯ: ಸರ್ಕಾರ ಈ ಕ್ರಮಕ್ಕೆ ಮುಂದಾಗದೆ ಇರುವುದನ್ನು ನೋಡಿದರೆ ಸುಪ್ರಸಿದ್ಧ ಸಾಹಿತಿ ಡಾ.ಎ.ಆರ್. ಕೃಷ್ಣಶಾಸ್ತ್ರೀರವರಿಗೆ ಕನ್ನಡಿಗರಾದ ನಾವುಗಳು ಅಪಮಾನ ಮಾಡುತ್ತಿದ್ದೇವೋ ಎಂಬ ಆತಂಕ ಕಾಡುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ಈ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ರುಪಾಯಿ ಮಂಜೂರಾಗಿತ್ತು. ಆದರೆ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬಂದ ಹಣ ಹಿಂದಕ್ಕೆ ಹೋಗಿದೆ. ಸ್ಮಾರಕ ಭವನ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಸುವರ್ಣ ಕನ್ನಡ ಭವನಕ್ಕೆ ಅನುದಾನದಿಂದ 10 ಲಕ್ಷ ನೀಡಬೇಕೆಂದು ಸಚಿವರಿಗೆ ಮನವಿ ಮಾಡಲಾಯಿತು. ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಶಿವಸ್ವಾಮಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.