ಗಿರಿ ಜನರಿಗೆ ಭೂಮಿ ವಿತರಣೆ ಮಾಡಿ
ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ. 21
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಹೋಗುವವರ ಭೂಮಿಯನ್ನು ಅಲ್ಲಿಯೇ ವಾಸವಾಗಿರುವ ಗಿರಿ ಜನರಿಗೆ ವಿತರಣೆ ಮಾಡಬೇಕು ಎಂದು ಜಿಲ್ಲಾ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾಗರಿಕ ಸಮಿತಿಯ ಅಧ್ಯಕ್ಷ ಮುಂಡುಗಾರು ಪುಟ್ಟಪ್ಪ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರ್ಕಾರ ಸೂಕ್ತ ಬೆಲೆ ಕೊಟ್ಟು ಅಲ್ಲಿಂದ ಹೊರ ಹೋಗುವವರ ಭೂಮಿಯನ್ನು ಖರೀದಿ ಮಾಡಿ ಇದೇ ಪ್ರದೇಶದಲ್ಲಿ ವಾಸವಾಗಿರುವ ಗಿರಿಜನರಿಗೆ ಈ ಭೂಮಿಯಲ್ಲಿಯೇ ಪುರ್ನವಸತಿ ಕಲ್ಪಿಸುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿನ ಗಿರಿಜನರು ಸಮಾಜದೊಂದಿಗೆ ಹೊಂದಿಕೊಂಡು ಬದುಕುತ್ತಾರೆಯೇ ಹೊರತು ಅವರ ಹೆಸರಿನಲ್ಲಿ ಪ್ರತ್ಯೇಕ ಗುಂಪುಗಳನ್ನು ಮಾಡಿ ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಡಿಸುವ ಪ್ರಯತ್ನಕ್ಕೆ ಸರ್ಕಾರವಾಗಲೀ, ಸಂಘಟನೆಗಳಾಗಲೀ ಅಥವಾ ವ್ಯಕ್ತಿಗಳಾಗಲೀ ಪ್ರಯತ್ನಿಸಬಾರದು ಎಂದು ಆಗ್ರಹಿಸಿದರು.
ಆಂತರಿಕವಾಗಿ ವಿರೋಧ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪಶ್ಚಿಮಘಟ್ಟಗಳ ನಾಲ್ಕು ಜಿಲ್ಲೆಯ ಶೇ. 90 ರಷ್ಟು ಗಿರಿಜನರು ಸ್ಥಳಾಂತರಗೊಳ್ಳುವ ಪ್ರಕ್ರಿಯೆಗೆ ಆಂತರಿಕವಾಗಿ ವಿರೋಧವಿದ್ದು, ಈ ಗಂಭೀರ ಮತ್ತು ಸೂಕ್ಷ್ಮ ವಿಷಯದಲ್ಲಿ ಸರ್ಕಾರ ಯಾವುದೇ ಪ್ರಲೋಭನೆ ಹಾಗೂ ಒತ್ತಡ ಮತ್ತು ಮಧ್ಯವರ್ತಿಗಳ ಬಲ ಪ್ರಯೋಗವನ್ನು ನಡೆಸದೆ ಪಾರದರ್ಶಕವಾಗಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಗಿರಿಜನರ ಗ್ರಾಮ ಸಭೆ ಕರೆದು ಗಿರಿ ಜನರ ಮನ-ಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಜನಾಂಗದಲ್ಲಿ ಮೂಡಿರುವ ಮಾನಸಿಕ ಅಭದ್ರತೆಯನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಹಕ್ಕನ್ನು ನೀಡಬೇಕು: ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಸರ್ಕಾರವು ಹೊರಗಿನ ವ್ಯಕ್ತಿಗಳಿಗೆ ಅಥವಾ ಏಜೆನ್ಸಿಗಳಿಗೆ ನಿಷೇಧ ಹೇರಿ, ಅರಣ್ಯ ಪ್ರದೇಶಗಳಲ್ಲಿ ಅನಪೇಕ್ಷಿತ ವ್ಯಕ್ತಿಗಳ ಓಡಾಟವನ್ನು ಪೂರ್ಣ ನಿರ್ಬಂಧಿಸಿ ಸ್ಥಳೀಯ ಗಿರಿಜನರಿಗೆ ಮತ್ತು ಅರಣ್ಯ ವಾಸಿಗಳಿಗೆ ಸಂಗ್ರಹದ ಪೂರ್ಣ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಪ್ರಸ್ತಾವನೆ: ಕುದುರೆಮುಖ ಪ್ರದೇಶವನ್ನು ಹುಲಿ ಯೋಜನೆಗೆ ಸೇರ್ಪಡಿಸುವ ಬದಲು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿ ಅದರ ಸಾಂಪ್ರದಾಯಿಕ ಮಹತ್ವವನ್ನು ಕಾಪಾಡಿಕೊಳ್ಳುವ ಸರ್ಕಾರದ ಪ್ರಸ್ತಾವನೆಯನ್ನು ಸಮಿತಿಯು ಬೆಂಬಲಸಲಿದ್ದು, ಕಳೆದ ವರ್ಷ ಘೋಷಣೆಯಾದ ಹುಲಿ ಯೋಜನೆಯನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪುನ- ಪ್ರಸ್ತಾವನೆಯನ್ನು ಸಲ್ಲಿಸಿಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಾತುಕತೆಗೆ ಆಹ್ವಾನ: ಶಸ್ತ್ರ ಹಿಡಿದಿರುವ ಮಲೆನಾಡಿನ ಯುವಕ, ಯುವತಿಯರನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ. ಇದಕ್ಕೆ ಪೂರಕವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಕ್ಸಲರೊಂದಿಗೆ ಮುಕ್ತ ಮಾತುಕತೆಗೆ ಆಹ್ವಾನ ನೀಡಿರುವುದನ್ನು ಸಮಿತಿ ಸ್ವಾಗತಿಸುತ್ತದೆ. ಕಾಡಿನಲ್ಲಿರುವ ನಕ್ಸಲರು ಈ ಅವಕಾಶವನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿ ಬರಬೇಕು ಎಂದು ಮನವಿ ಮಾಡಿದರು.
ಶಾಂತಿ ಪ್ರಕ್ರಿಯೆ: ಕಳೆದೊಂದು ದಶಕದಲ್ಲಿ ಈ ವ್ಯಾಪ್ತಿಯಲ್ಲಿ ಗಿರಿಜನರು ಮತ್ತು ಇತರ ಅರಣ್ಯವಾಸಿಗಳ ಮೇಲೆ ಹೂಡಿದ್ದ ನಕ್ಸಲ್ ಸಂಬಂಧಿತ ಎಲ್ಲಾ ಕೇಸುಗಳನ್ನು ಸರ್ಕಾರ ಬೇಷರಾತ್ತಾಗಿ ಹಿಂಪಡೆಯುವುದರ ಮೂಲಕ ಶಾಂತಿ ಪ್ರಕ್ರಿಯೆಗೆ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು ಎಂದ ಅವರು, ಡಿ.ಎನ್. ಜೀವರಾಜ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ನಮ್ಮ ಮನವಿಯನ್ನು ಅಧರಿಸಿ ಮುಖ್ಯಮಂತ್ರಿಗಳು ಗೃಹ ಕಾರ್ಯದರ್ಶಿಗಳಿಗೆ ಕೇಸು ಹಿಂಪಡೆಯಲು ಆದೇಶ ನೀಡಿದ್ದರು. ಆದರೆ, ಇದು ಸರ್ಕಾರದ ಮಟ್ಟದಲ್ಲಿ ನೆನಗುದಿಗೆ ಬಿದ್ದಿದೆ. ಸರ್ಕಾರ ಕೂಡಲೇ ಕೇಸುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕಡೆಗುಂಡಿ ವೆಂಕಣ್ಣ, ಎಡಗುಂದ ರಂಗನಾಥ್ ಹಾಗೂ ನಾಗೇಶ್ ಅಂಗೀರಸ್ ಮತ್ತಿತರರು ಉಪಸ್ಥಿತರಿದ್ದರು.