ಪಾರದರ್ಶಕವಾಗಿ ಭೂಮಿ ಹಂಚಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.21
ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಸಣ್ಣ, ಬಡ ಕುಟುಂಬಗಳಿಗೆ ಭೂ ಲಭ್ಯತೆಯ ಆಧಾರದ ಮೇಲೆ ಭೂ ಸುಧಾರಣಾ ಕಾನೂನು ಮಾದರಿಯಲ್ಲೇ ಪಾರದರ್ಶಕವಾಗಿ ಕಂದಾಯ ಭೂಮಿಯನ್ನು ಹಂಚಬೇಕು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ (ಎಸ್‌ಡಿಎಫ್) ಕಾರ್ಯಕರ್ತೆ ಸುಮ ನಾಗೇಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅರಣ್ಯ ಭೂಮಿ ತೆರವಿನಿಂದ ಭೂಮಿ ಕಳೆದುಕೊಳ್ಳುವ ಬಡ ಕುಟುಂಬಗಳಿಗೆ ಲಭ್ಯತೆ ಆಧಾರದ ಮೇಲೆ ಕಂದಾಯ ಭೂಮಿಯನ್ನು ಹಂಚಬೇಕು. ಕಂದಾಯ ಭೂಮಿ ಇಲ್ಲದಿದ್ದರೆ ಕನಿಷ್ಠ ಆಯಾ ವ್ಯಾಪ್ತಿಯಲ್ಲಿ ಕಂದಾಯ ನಿವೇಶನ ನೀಡುವ ಜತೆಗೆ 1.20 ಲಕ್ಷ ರುಪಾಯಿ ವೆಚ್ಚದ ಮನೆ ನಿರ್ಮಿಸಿಕೊಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನ್ಯಾಯ ಸಮ್ಮತ ನಿವೇಶನ: ಗ್ರಾಪಂ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಜನಪ್ರತಿನಿಧಿಗಳ ಹಸ್ತಕ್ಷೇಪಕ್ಕೆ ಅವಕಾಶವಾಗದ ರೀತಿ ಮುಕ್ತ ಮತ್ತು ನ್ಯಾಯ ಸಮ್ಮತ ನಿವೇಶನ ಫಲಾನುಭವಿಗಳ ಪತ್ತೆ ಹಚ್ಚುವ ಕಾರ್ಯಕ್ಕೆ ನಿಯೋಜನೆಗೊಳಿಸಿ ಅವರು ತಪ್ಪಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅವಕಾಶ ಇರುವಂತೆ ಆದೇಶ ಹೊರಡಿಸಿ ರಾಜ್ಯಪಾಲರನ್ನು ಮನವೊಲಿಸುವುದರ ಮೂಲಕ ಭೂ ಕಂದಾಯ ಕಾಯ್ದೆಗೆ ಅಂಕಿತ ಪಡೆಯಬೇಕೆಂದು ಹೇಳಿದರು.
ಭೂ ಒತ್ತುವರಿ: ದೊಡ್ಡ ಒತ್ತುವರಿದಾರರು ಈ ನೆಲದ ಕಾನೂನಿಗೆ ಬೆಲೆ ನೀಡಿ ತಾವು ಮಾಡಿಕೊಡಿರುವ ಭೂ ಒತ್ತುವರಿಯನ್ನು ತೆರವುಗೊಳಿಸಲು ಮುಂದೆ ಬಂದು ಮಾದರಿಯಾಗಬೇಕು. ಸಣ್ಣ ರೈತರು, ನಿವೇಶನ, ಒಂದೆರೆಡು ಎಕರೆ ಒತ್ತುವರಿದಾರರು ದೊಡ್ಡ ಒತ್ತುವರಿದಾರರೊಂದಿಗೆ ಕೈ ಜೋಡಿಸದೆ ತಾವೇ ಸ್ವತಃ ಸಂಘಟನೆಯ ಮೂಲಕ ಸರ್ಕಾರಕ್ಕೆ ಭೂಮಿ ಕೊಡಲು ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.
ದೊಡ್ಡ ವಿಪರ್ಯಾಸ: ಎಡಪಂಥಿಯ ಚಿಂತನೆಗಳನ್ನು ದಿಕ್ಕರಿಸುತ್ತ ಬಡವರನ್ನು ತಮ್ಮ ಕಪಿಮುಷ್ಟಿಯೊಳಗೆ ಇಟ್ಟುಕೊಳ್ಳಲು ಯತ್ನಿಸಿದ ಜನರೆ ತಮ್ಮ ಬುಡಕ್ಕೆ ನೀರು ಬರುತ್ತಿದ್ದಂತೆ ನಕ್ಸಲೀಯರನ್ನು ಬೆಂಬಲಿಸಿ ಮಾತನಾಡಿದ್ದಲ್ಲದೆ ಮುಷ್ಕರಕ್ಕೆ ಇಳಿದದ್ದು ಒಂದು ದೊಡ್ಡ ವಿಪರ್ಯಾಸ. ಮಾವೋ ಸಿದ್ಧಾಂತದ ಪ್ರಕಾರ ರೈತರು ಕೇವಲ ದುಡಿಯುವವರೆ ಹೊರತು ಮಾಲೀಕರು ಅವರನ್ನಾಳುವ ಸರ್ಕಾರವೇ ಆಗಿದೆ ಅಂದರೆ ನಕ್ಸಲೀಯರನ್ನು ಬೆಂಬಲಿಸಿ ತಾವು ಹೊಂದಿದ ಭೂಮಿಯ ಹಕ್ಕನ್ನು ಭವಿಷ್ಯದಲ್ಲಿ ಆಳುವವರಿಗೆ ಒಪ್ಪಿಸಲು ಸಿದ್ದರಿದ್ದೀರಾ ಎಂದು ಪ್ರಶ್ನಿಸಿದರು.
ಭೂ ಮಂಜೂರಾತಿ: 1980 ಮತ್ತು 90ರ ದಶಕದಲ್ಲಿ ಫಾರಂ ನಂ. 50-51-52 ಮತ್ತು 53 ಈ ಕಾಲಂಗಳಲ್ಲಿ ಭೂ ರಹಿತರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆ ಮಿತಿಗೆ ಒಳಪಟ್ಟು ಭೂ ಮಂಜೂರಾತಿಯನ್ನು ಮಾಡಿದ್ದು ಈ ಪ್ರಕ್ರಿಯೆಯಲ್ಲಿ ಶೇ. 50ಕ್ಕೂ ಹೆಚ್ಚು ಭೂಮಿಯು ಬೇನಾಮಿ ಹೆಸರಿನಲ್ಲಿ ರಾಜಕಾರಣಿಗಳು, ಶ್ರೀಮಂತರು ಇತರೆ ಬಲಾಡ್ಯರು ಮೋಸದಿಂದ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಆದ ಎಲ್ಲಾ ಮಂಜೂರಾತಿಗಳನ್ನು ಪುನರ್ ಸಮೀಕ್ಷೆಗೆ ಒಳಪಡಿಸಿ ಅಂತಹ ಪ್ರಕರಣಗಳ ಸಾಗುವಳಿ ಚೀಟಿಯನ್ನು ರದ್ದು ಪಡಿಸುವುದರ ಮೂಲಕ ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆದು ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ರಾಜ್ಯ ಕಂದಾಯ ಸಚಿವರನ್ನು ಆಗ್ರಹಿಸಿದ್ದಾರೆ.