ಮರ ಸಾಗಾಣೆ ನಿರ್ಬಂಧಿಸುವಂತೆ ಮನವಿ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕೊಡಿಗೆ ಮೂಲಕ ಕುಂಬಾರಕೊಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಸಾಗಾಟವನ್ನು ನಿರ್ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.
ಹುತ್ತಿನಗದ್ದೆಯ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಬೆಳೆದ ಸಿಲ್ವರ್, ಮ್ಯಾಂಜಿಯಮ್ ಮರಗಳನ್ನು ಮಳೆಗಾಲವಾದ ಈ ವೇಳೆಯಲ್ಲಿ ಸಾಗಾಟ ಮಾಡಲಾಗುತ್ತಿದೆ. ನಿತ್ಯ ಟ್ರ್ಯಾಕ್ಟರ್, ಲಾರಿಗಳನ್ನು ಬಳಸಿ ಮರಗಳನ್ನು ಸಾಗಿಸುತ್ತಿರುವ ಪರಿಣಾಮ ಸ್ಥಿರೂರು ದೇವಸ್ಥಾನದಿಂದ ಕುಂಬಾರಕೊಡಿಗೆ ಅಗಳಗಂಡಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಪಾದಾಚಾರಿಗಳೂ ತಿರುಗಾಡದಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಮರ ಪಡೆದ ವ್ಯಾಪಾರಿಯನ್ನು ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಾರೋಗ್ಯ ಪೀಡಿತರಿಗೆ, ಶಾಲಾ ಮಕ್ಕಳ ತಿರುಗಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ತಕ್ಷಣ ಮರ ಸಾಗಾಟವನ್ನು ಮಳೆಗಾಲ ಕಳೆಯುವವರೆಗೂ ನಿರ್ಬಂಧಿಸಿ ಇದೀಗ ಹಾಳಾದ ರಸ್ತೆಯನ್ನು ದುರಸ್ತಿಪಡಿಸಿಕೊಡುವಂತೆ ಗ್ರಾಮಸ್ಥರಾದ ಎಸ್.ಕೆ. ಸತೀಶ್ ಜಿಲ್ಲಾಧಿಕಾರಿಗಳಿಗೆ ಮತ್ತು ಹೇರೂರು ಗ್ರಾಪಂಗೆ ದೂರು ಸಲ್ಲಿಸಿದ್ದಾರೆ.
--