ಮಹಿಳೆಯ ಶವ ಪತ್ತೆ: ಕೊಲೆ ಶಂಕೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.21
ಸುಮಾರು 24 ವರ್ಷ ವಯಸ್ಸಿನ ಮಹಿಳೆಯ ಶವ ಮೂಡಿಗೆರೆಯ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ಮಹಿಳೆ ಮಮತಾ ಶಿವಮೊಗ್ಗ ಸಮೀಪದ ಮಂಗೋಟಿ ಗ್ರಾಮದವರೆಂದು ಗುರುತು ಪತ್ತೆ ಹಚ್ಚಲಾಗಿದೆ. ಈ ಕೊಲೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಶುಕ್ರವಾರ ರಾತ್ರಿ ಮೃತ ಮಹಿಳೆಯ ಪತಿ, ತಾಯಿ ಹಾಗೂ ಸಂಬಂಧಿಕರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬಂದು ಮೃತ ದೇಹದ ಗುರುತು ಹಚ್ಚಿದ್ದಾರೆ.
ಗರ್ಭದಲ್ಲೇ ಸಾವು: ಮಂಗೋಟಿ ಗ್ರಾಮದ ಮಂಜೇಶ್ ಹಾಗೂ ಸಾದರಹಳ್ಳಿಯ ಮಮತಾ ಅವರು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅತ್ತೆ, ಮಾವ, ಗಂಡ ಹಾಗೂ ಹೆಂಡತಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಮತಾ ಅವರಿಗೆ ವೈದ್ಯಕೀಯ ಕಾರಣಗಳಿಂದಾಗಿ ಮಕ್ಕಳು ಗರ್ಭದಲ್ಲೇ ಮೃತಪಟ್ಟಿದ್ದವು.
ಗಂಡ ಮಂಜೇಶ್ ಅವರು ಹೇಳುವ ಪ್ರಕಾರ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇತ್ತೀಚೆಗೆಷ್ಟೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಪತ್ನಿ ಮಮತಾ ಮನೆಯಲ್ಲಿದ್ದು, ಎಲ್ಲರಿಗೂ ಊಟ ಬಡಿಸಿ, ತಾನು ಸಹ ಊಟ ಮಾಡಿ ಮಲಗಿಕೊಂಡಿದ್ದರು. ಆದರೆ, ಬುಧವಾರ ಬೆಳಿಗ್ಗೆ ಎದ್ದು ನೋಡಿದಾಗ ಪತ್ನಿ ಮನೆಯಲ್ಲಿರಲಿಲ್ಲ. ಎಲ್ಲಾ ಕಡೆಯಲ್ಲಿ ಹುಡಿಕಾಡಿದೇವು. ಸುಳಿವು ಸಿಗಲಿಲ್ಲ. ಆದರೆ, ಇಂದೇ ಇಲ್ಲೇ ನೋಡುತ್ತಿರುವುದು ಎಂದು ಹೇಳಿದರು.
ಕೊಲೆ ಶಂಕೆ: ಅವರು ಹೇಳುವ ಪ್ರಕಾರ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ಮಮತಾ ಶುಕ್ರವಾರ ಶವವಾಗಿ ಪತ್ತೆಯಾಗಿದ್ದು, ಮೃತ ದೇಹದ ಸ್ಥಿತಿ ನೋಡಿದರೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಆರೋಪಿಗಳು ಬೇರೆ ಕಡೆಯಲ್ಲಿ ಕೊಲೆ ಮಾಡಿ ಇಲ್ಲಿಗೆ ಮೃತ ದೇಹ ತಂದು ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿದ್ದ ಮಮತಾ ನಾಪತ್ತೆಯಾಗಿದ್ದು ಹೇಗೆ, ಶಿವಮೊಗ್ಗ ಸಮೀಪದ ಮಂಗೋಟಿಯಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ದೇಹದ ಸ್ಥಿತಿ ನೋಡಿದರೆ ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಬಣಕಲ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ತನಿಖೆ ಆರಂಭಿಸಿದ್ದಾರೆ.