ಬಿಸಿಯೂಟ ಕೇಂದ್ರ ಉದ್ಘಾಟನೆ
ತರೀಕೆರೆ: ಪಟ್ಟಣದ ಅಂಬೇಡ್ಕರ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ಕೇಂದ್ರದ ಉದ್ಘಾಟನೆಯನ್ನು ಏರ್ಪಡಿಸಲಾಗಿತ್ತು.
ಯೋಜನೆಯ ಸಹಾಯಕ ನಿರ್ದೇಶಕ ಜಿ.ಚೌಡಯ್ಯ ಬಿಸಿಯೂಟ ಕೇಂದ್ರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಗುಣಮಟ್ಟದ ಆಹಾರ ಕೊಡಬೇಕು ಎಂದು ತಿಳಿಸಿದರು.
ಎನ್. ವೆಂಕಟೇಶ್ ಮಾತನಾಡಿ, ಎಲ್ಲರ ಸಹಕಾರದಿಂದ ಅಕ್ಷರ ದಾಸೋಹ ಕಟ್ಟಡ ಆಗಿದೆ, ಶಾಲೆಯಲ್ಲಿ ಆಟದ ಸಾಮಗ್ರಿ ಇದೆ, ಧ್ವಜ ಸ್ಥಂಬ ಇದೆ ಎಂದು ತಿಳಿಸಿದರು.
ಕಮಲಮ್ಮ, ಅಕ್ಷರದಾಸೋಹ ಸಮನ್ವಯಾಧಿಕಾರಿ ತಿಮ್ಮಯ್ಯ, ಕಲ್ಲೇಶ್, ಕಲ್ಲೇಶ್, ಕೆ.ಜಿ. ಬಸವರಾಜ್ ಇದ್ದರು.
ಉತ್ತಮ ಪರಿಸರದಿಂದ ಆರೋಗ್ಯ: ಡಾ.ವೆಂಕಟೇಶ್
ಶೃಂಗೇರಿ: ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛತೆ ಕಾಪಾಡುವುದರಿಂದ ಆರೋಗ್ಯ ನೈರ್ಮಲ್ಯ ಕಾಪಾಡಲು ಸಾಧ್ಯ ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವೆಂಕಟೇಶ್ ಅಭಿಪ್ರಾಯಪಟ್ಟರು. ಶನಿವಾರ ತಾಲೂಕು ಆರೋಗ್ಯ ಇಲಾಖೆ, ತಾಪಂ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಪಪಂ ಮುಂಬಾಗದ ಗೌರಿಶಂಕರ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚಾರಣೆ ಹಾಗೂ ಡೆಂಘೀ ಮುಂಜಾಗ್ರತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಪಂ ಸದಸ್ಯ ಬಿ. ಶಿವಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ದೇವಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಸಿ. ಶಂಕರಪ್ಪ, ಪಪಂ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್, ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಇದ್ದರು.
ದಾಳಿ: ಅಪಾರ ಮರಳು ವಶ
ಮೂಡಿಗೆರೆ: ತಾಲೂಕಿನ ಹೇಮಾವತಿ ನದಿಯಲ್ಲಿನ ಮರಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು, ತಹಸೀಲ್ದಾರ್ ರುದ್ರಪ್ಪಾಜಿ ರಾವ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ 2 ಸಾವಿರಕ್ಕೂ ಅಧಿಕ ಲೋಡ್ ಮರಳನ್ನು ವಶ ಪಡಿಸಿಕೊಂಡಿದ್ದಾರೆ. ಆದರೆ ಅದನ್ನು ಸಾಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನದಿಯ ಸ್ವರೂಪವನ್ನು ಉಳಿಸುವಂತೆ ರೈತಮುಖಂಡರು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು. ಹಿಂದೆ ಅನೇಕ ಬಾರಿ ಜಿಲ್ಲಾಧಿಕಾರಿ ಅಕ್ರಮವನ್ನು ತಡೆಗಟ್ಟುವಂತೆ ಆದೇಶಿಸಿದ್ದರು. ಆದರೆ ಈವರೆಗೂ ಅದನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ಮೂಡಿಗೆರೆ ತಹಸೀಲ್ದಾರ್ ರುದ್ರಪ್ಪಾಜಿ ರಾವ್ರಿಗೆ ಮರಳು ವಶಪಡಿಸಿಕೊಂಡು ದಂಡ ವಿಧಿಸುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ತಹಸೀಲ್ದಾರರು 21ರಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗೋಣಿಬೀಡು ಹೋಬಳಿಯ ಹೊರಟಿ ಗ್ರಾಮದಲ್ಲಿ ದಾಳಿ ನಡೆಯಿತು. ನಂತರ ಚಿನ್ನಿಗ, ಅಣಜೂರು ಸೇರಿದಂತೆ ಅನೇಕ ಕಡೆ ದಾಳಿ ನಡೆಸಲಾಯಿತು. ಕೆಲವೆಡೆ ಅಕ್ರಮ ಮರಳು ಸಂಗ್ರಹಣೆಯನ್ನು ನೋಡಿ ಅಧಿಕಾರಿಗಳು ಬೆಚ್ಚಿ ಬಿದ್ದರು. ತಹಸೀಲ್ದಾರ್ ಮರಳನ್ನು ವಶಪಡಿಸಿಕೊಂಡು ಮೂಡಿಗೆರೆ ಸಾರಿಗೆ ಇಲಾಖೆ ಘಟಕಕ್ಕೆ ಸಾಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ನಾರಯಣ ಮಲ್ಯರಿಗೆ ಸೂಚಿಸಿದರು. ಆದರೆ ಸುಮಾರು ಮರಳನ್ನು ವಶಪಡಿಸಿಕೊಂಡು ಮಹಜರು ಮಾಡಿದರೂ ಮರಳನ್ನು ಸಾರಿಗೆ ಇಲಾಖೆ ಘಟಕಕ್ಕೆ ಇಂದಿಗೂ ಸಾಗಿಸಿಲ್ಲ. 21ರಂದು ನಡೆದ ದಾಳಿಯಿಂದ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾದಿಕಾರಿಗಳು ಮಧ್ಯ ಪ್ರವೇಶಿಸಿ ವಶಪಡಿಸಿಕೊಂಡಿರುವ ಮರಳನ್ನು ಸಾಗಿಸುವುದರ ಬದಲು ಸ್ಥಳದಲ್ಲಿಯೆ ಹರಾಜು ಮಾಡಿ, ಸರ್ಕಾರಕ್ಕೆ ದೊರಕಿಸುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಂದು ಸಭೆ
ನರಸಿಂಹರಾಜಪುರ: ತಾಲೂಕು ದ್ವಿಚಕ್ರ ವಾಹನಗಳ ಮೆಕ್ಯಾನಿಕ್ಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಉದ್ಘಾಟನಾ ಸಮಾರಂಭ 23 ರ ಸಂಜೆ 4 ಗಂಟೆಗೆ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ ಎಂದು ಮೆಕ್ಯಾನಿಕ್ ಸಂಘದ ನೂತನ ಅಧ್ಯಕ್ಷ ಅಹಮ್ಮದ್ ಭಾಷಾ ತಿಳಿಸಿದ್ದಾರೆ.
ಸೇನಾ ನೇಮಕಾತಿ ರ್ಯಾಲಿ ಮುಂದೂಡಿಕೆ
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಜುಲೈ 3ರಿಂದ 10ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಮಳೆಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಚುನಾವಣೆ
ಮೂಡಿಗೆರೆ: 2013 ರಿಂದ 2018 ರ ಅವಧಿಗೆ ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆಯಲಿದ್ದು ಎಲ್ಲಾ ಸರ್ಕಾರಿ ನೌಕರರು ನೋಂದಣಿಯನ್ನು ಇಲಾಖೆಯ ಮುಖ್ಯಸ್ಥರ ಮೂಲಕ ಪಾವತಿಸುವಂತೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ. ಗಂಗಾಧರ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ನೌಕರರ ಸಂಘ 300 ಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿ, ಸಮವಸ್ತ್ರಗಳನ್ನು ಉಚಿತವಾಗಿ ಒದಗಿಸುವುದರೊಂದಿಗೆ. ಸರ್ಕಾರಿ ಇಲಾಖೆ ಸೇರಿದಂತೆ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಸನ್ಮಾನಿಸಿದೆ ಎಂದರು. ಜುಲೈ 11ರಿಂದ 21ರವರೆಗೂ ಚುನಾವಣೆ ಪ್ರಕ್ರಿಯೆ ಪ್ರಾಂಭವಾಗಿಲಿದ್ದು, ತಾಲೂಕಿನ ನೌಕರರು ಜೂನ್ 25ರೊಳಗೆ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಿದರು. ಈ ಸಂಧರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಕೆ. ಗೋಪಾಲಕೃಷ್ಣ, ಪೂರ್ಣೇಶ್, ಸತೀಶ್ ಇದ್ದರು.
25ರಂದು ಉಚಿತ ಹೃದಯ ತಪಾಸಣೆ
ಶಿವಮೊಗ್ಗ: ವಾಜಪೇಯಿ ಆರೋಗ್ಯಶ್ರೀ ಯೋಜನೆಯಿಂದ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೂ.25ರಂದು ಜಿಲ್ಲೆ ಕಡುಬಡವರಿಗೆ ನುರಿತ ವೈದ್ಯರಿಂದ ಹೃದಯರೋಗ ಹಾಗೂ ಕ್ಯಾನ್ಸರ್ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಬಿಪಿಎಲ್ ಕಾರ್ಡ್ದಾರರು ಈ ಯೋಜನೆ ಫಲಾನುಭವಿಗಳಾಗಿದ್ದು, ಹೃದಯ ಸಂಬಂಧ ಖಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣೆ ಹಾಗೂ ವೈದ್ಯರಿಂದ ಸಮಾಲೋಚನೆ ನಡೆಲಾಗುವುದು. ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವಿರುತ್ತದೆ.
ನಗರದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆ ನಂಜಪ್ಪ ಲೈಫ್ಕೇರ್ ಹಾಗೂ ಕ್ಯಾನ್ಸರ್ ಸಂಬಂಧಿಸಿದಂತೆ ಮಲೆನಾಡು ಆಸ್ಪತ್ರೆಯ ನುರಿತ ವೈದ್ಯರು ಈ ತಪಾಸಣೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ರಸ್ತೆಯಲ್ಲಿ ನೀರು; ಚರಂಡಿಗೆ ಆಗ್ರಹ
ನರಸಿಂಹರಾಜಪುರ: ಕುದುರೆಗುಂಡಿ - ಮುತ್ತಿನಕೊಪ್ಪ 100 ಮೀಟರ್ ರಸ್ತೆಯಲ್ಲಿ ಮೋರಿ, ಚರಂಡಿ ಇಲ್ಲದೆ ಎರಡು ಅಡಿ ನೀರು ನಿಲ್ಲುತ್ತಿದ್ದು ವಾಹನ ಸಂಚಾರರಿಗೆ ತೊಂದರೆಯಾಗುತ್ತಿದೆ. ಮಳೆ ಬಂದಾಗ ನೀರು ಸಮರ್ಪಕವಾಗಿ ಹರಿಯಲು ಚರಂಡಿಯೇ ಇಲ್ಲ. ಇದರಿಂದ ರಸ್ತೆಯಲ್ಲೇ ನೀರು ನಿಂತು ಕೆರೆಯಂತಾಗುತ್ತಿದ್ದು, ವಾಹನ ಸಂಚಾರರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಸಮರ್ಪಕ ಚರಂಡಿ ಮಾಡಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.