ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ವಿತರಣೆ
ಕ.ಪ್ರ.ವಾರ್ತೆ , ನ.ರಾ.ಪುರ , ಜೂ.22
ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಗೆ ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆಯ ಉದ್ಯೋಗಿಗಳ ಆರ್ಸಿಎಲ್ ಸಂಘಟನೆಯಿಂದ ಶಿಕ್ಷಣಕ್ಕಾಗಿ ಬೆಳಕು ಯೋಜನೆಯಡಿ 100 ಸೋಲಾರ್ ದೀಪಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಇನ್ಪೋಸಿಸ್ ಸಂಸ್ಥೆಯ ವೈಸ್ ಪ್ರಸಿಡೆಂಟ್ ಸೂರ್ಯಪ್ರಕಾಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, 10 ಸಾವಿರ ರುಪಾಯಿ ಬಂಡವಾಳದಿಂದ ಪ್ರಾರಂಭಗೊಂಡ ಇನ್ವೋಸಿಸ್ ಸಂಸ್ಥೆ ಇಂದು ಬೃಹತ್ ಸಂಸ್ಥೆಯಾಗಿ ಬೆಳವಣಿಗೆ ಹೊಂದುವಲ್ಲಿ ನೂರಾರು ಕೈಗಳ ಪರಿಶ್ರಮವಿದೆ. ಸಂಸ್ಥೆಯ ಆಸಕ್ತ ಉದ್ಯೋಗಿಗಳು ಪ್ರಾಂಭಿಸಿದ ಆರ್ಸಿಎಲ್ ಸಂಘಟನೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸೋಲಾರ್ ದೀಪಗಳನ್ನು ಶಾಲೆಗಳಿಗೆ ನೀಡುತ್ತಿದ್ದೇವೆ. ಈಗಾಗಲೇ 3 ಶಾಲೆಗಳಿಗೆ ಸೋಲಾರ್ ದೀಪಗಳನ್ನು ವಿತರಿಸಲಾಗಿದ್ದು, ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು.
ಸಂಸ್ಥೆಯ ಅಸೋಸಿಯೇಟ್ ಉಪಾಧ್ಯಕ್ಷ ಗಿರೀಶ್ ಮಾತನಾಡಿ, ಮುಂದಿನ 10 ವರ್ಷಗಳಲ್ಲಿ ಪ್ರತಿ ಮನೆಗೂ ಸೋಲಾರ್ ದೀಪ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಸೋಲಾರ್ ಅಗತ್ಯ ಎಂದರು. ಕೊಪ್ಪ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ಮಾತನಾಡಿ, ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯ ಮೂಲ ಸೌಕರ್ಯಗಳಿಗಾಗಿ 2 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡೇಗದ್ದೆ ಚಕ್ರಪಾಣಿ ಮಾತನಾಡಿ, ಶಾಲೆಯಲ್ಲಿ ಹಿಂದೆ ಓದಿದ್ದ ರಾಗೋಡಿನ ವಿದ್ಯಾರ್ಥಿನಿ ಜಯಂತಿ ಎಂಬವರು ಇಂದು ಇನ್ಪೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ತಾವು ಓದಿದ ಶಾಲೆಗೆ 100 ಸೋಲಾರ್ ದೀಪ ಕೊಡಿಸುವ ಮೂಲಕ ಶಾಲೆಯನ್ನು ನೆನಪಿಸಿಕೊಂಡಿದ್ದಾರೆ ಎಂದರು.
ಸಂಸ್ಥೆಯ ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಜಯಂತಿ, ಎಂಜಿನಿಯರ್ ಅಶ್ವಿನಿ ಕುಮಾರ್, ಪೂರ್ಣಚಂದ್ರ, ವಿಶ್ವನಾಥ್, ಶ್ರೀನಿವಾಸ್, ಅಹಮ್ಮದ್, ಶಿವಪ್ಪ, ಸತೀಶ್, ಇಂದಿರಾ, ಸಿಕ್ವೇರಾ ಇದ್ದರು.