ಪಾಸ್‌ವರ್ಡ್ ಗುಪ್ತವಾಗಿಡಲು ವ್ಯಾಪಾರಸ್ಥರಿಗೆ ಸಲಹೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು
ಆನ್ ಲೈನ್ ಮೂಲಕ ವಸ್ತುಗಳನ್ನು ಖರೀದಿಸುವ ವ್ಯಾಪಾರಸ್ಥರು ಪಾಸ್ ವರ್ಡ್‌ಗಳನ್ನು ಗುಪ್ತವಾಗಿಡಬೇಕು ಎಂದು ವಾಣಿಜ್ಯ ಇಲಾಖೆಯ ನಿವೃತ್ತ ಉಪ ಆಯುಕ್ತ ಪಾಶ್ವನಾಥ್ ಕಿವಿ ಮಾತು ಹೇಳಿದ್ದಾರೆ.
ಇಲ್ಲಿನ ಗಾಂಧಿನಗರದಲ್ಲಿರುವ ವರ್ತಕರ ಭವನದಲ್ಲಿ ಭಾನುವಾರ ನಡೆದ ಕಾರ್ಮಿಕರ ಕಾಯ್ದೆ, ವ್ಯಾಟ್, ಆಹಾರ ಪರವಾನಿಗೆ ಕುರಿತ ಕಾರ್ಯಾಗಾರದಲ್ಲಿ ಅವರು ಪ್ರಧಾನ ಭಾಷಣ ಮಾಡಿ, ಈಗ ಬಹಳಷ್ಟು ಮಂದಿ ಆನ್ ಲೈನ್ ಮೂಲಕ ಅತ್ಯಂತ ಸುಲುಭವಾಗಿ ವ್ಯಾಪಾರ ನಡೆಸುತ್ತಿದ್ದಾರೆ.
ಇದರಿಂದ ಹೆಚ್ಚಿನ ಅನುಕೂಲ ಇದೆ. ಆದರೆ, ಈ ವ್ಯವಹಾರಕ್ಕೆ ಬಳಸುವ ಪಾಸ್ ವರ್ಡ್‌ಗಳು ಬೇರೆ ಯಾರಿಗೂ ತಿಳಿಯದಂತೆ ಎಚ್ಚರ ವಹಿಸಬೇಕು ಎಂದರು.
ವ್ಯಾಪಾರಸ್ಥರಿಗೆ ಕೆಲವು ಮಾಹಿತಿಯ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಇದರಿಂದ ಕೆಲವು ಸಮಸ್ಯೆಗಳು ದೂರವಾಗಲಿವೆ ಎಂದ ಅವರು, ಇಂತಹ ಕಾರ್ಯಾಗಾರಗಳು ಆಗಾಗ ನಡೆಯುತ್ತಿರಬೇಕು ಎಂದು ಸಲಹೆ ನೀಡಿದರು.
ಸ್ವಚ್ಛತೆಗೆ ಆದ್ಯತೆ ನೀಡಿ: ಆಹಾರ ಸಂರಕ್ಷಣಾಧಿಕಾರಿ ಚೆಲುವರಾಜ್ ಮಾತನಾಡಿ, ವ್ಯಾಪಾರಸ್ಥರು ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ನೀಡಬೇಕು. ಆಗ ಸ್ವಚ್ಛತೆಗೂ ಆದ್ಯತೆಗೆ ನೀಡಬೇಕು. ಕಾನೂನು ಬಾಹಿರವಾಗಿ ಯಾರೂ ಕೂಡ ವ್ಯಾಪಾರ ಮಾಡಬಾರದು ಪ್ರತಿಯೊಬ್ಬರು ಪರವಾನಗಿ ನವೀಕರಣ ಮಾಡಿಸಬೇಕು ಎಂದು ಹೇಳಿದರು.
ಅನಧಿಕೃತ ಗುಟ್ಕಾ ಮಾರಾಟ: ಗ್ರಾಹಕರು ಕೂಡ ಎಚ್ಚರಿಕೆ ವಹಿಸಬೇಕು. ದಿನಾಂಕ ಮುಗಿದ, ಐಎಸ್‌ಐ ಮಾರ್ಕ್ ನೋಡಿ ವಸ್ತುಗಳನ್ನು ಖರೀದಿ ಮಾಡಬೇಕು. ಆಗ ಬಿಲ್ ತೆಗೆದುಕೊಳ್ಳುವುದನ್ನು ಮರೆಯಬಾರದು ಎಂದ ಅವರು, ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದರೂ ಸಹ ಕೆಲವೆಡೆ ಅನಧಿಕೃತವಾಗಿ ಗುಟ್ಕಾ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಅಕ್ರಮವಾಗಿ ದಾಸ್ತಾನು ಮಾಡಿ ಗುಟ್ಕಾ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀವಳ್ಳಿ ಮಾತನಾಡಿ, ವ್ಯಾಪಾರಸ್ಥರು ಒಬ್ಬರಿಗೆ ಕೆಲಸ ನೀಡಿದರೆ ಇದರಿಂದ ಅವರನ್ನು ಅವಲಂಬಿತ ಕುಟುಂಬದ ಎಲ್ಲರಿಗೂ ಸಹಾಯ ಮಾಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಾಲ ಕಾರ್ಮಿಕರನ್ನು ನೇಮಕ ಮಾಡಬಾರದು ಎಂದು ತಿಳಿಸಿದರು.
ಜಯಂತಿ ಕಾಫಿ ವರ್ಕ್ಸ್‌ನ ಮಾಲೀಕರಾದ ಶಂಕರಮೂರ್ತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವರ್ತಕರ ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಆರ್.ಎ. ವಾಸಿನ್, ಬಾಬುಲಾಲ್, ಚಂದ್ರಶೇಖರ್, ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.