ಪ್ರಕೃತಿ ವಿಕೋಪ ನೋವು ತಂದಿದೆ: ರಂಭಾಪುರಿ ಶ್ರೀ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ. 24
ಉತ್ತರಾಖಂಡ, ಕೇದಾರ ಮತ್ತು ಗುಪ್ತಕಾಶಿ ಮುಂತಾದೆಡೆ ಪ್ರಕೃತಿಯ ವಿಕೋಪದಿಂದ ಅಪಾರ ಸಾವು ನೋವು ಸಂಭವಿಸಿದ್ದು, ಅಲ್ಲಿನ ಭೂ ಕುಸಿತ ನಮಗೆ ದಿಗ್ಭ್ರಮೆ ಹುಟ್ಟಿಸಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದ್ದಾರೆ.
ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿಷ್ಠಾನ ಏರ್ಪಡಿಸಿದ್ದ ಧರ್ಮ ಮತ್ತು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಪಂಚಪೀಠಗಳಲ್ಲಿ ಒಂದಾದ ಶ್ರೀ ಕೇದಾರನಾಥ ಶಿವಾಚಾರ್ಯರು ಅಲ್ಲಿನ ಸಂತ್ರಸ್ತರಿಗೆ ನೆರವು ಒದಗಿಸುವುದರಲ್ಲಿ ನಿರತರಾಗಿದ್ದಾರೆ. ನಾವು ಆಹಾರ, ದಿನ ಬಳಕೆ ಹಾಗೂ ಔಷಧಿಗಳನ್ನು ನೀಡುವ ಮೂಲಕ ನೆರವು ನೀಡುವುದಾಗಿ ಶ್ರೀಗಳಿಗೆ ಸಂದೇಶ ರವಾನಿಸಿದ್ದೇವೆಂದು ತಿಳಿಸಿದರು.
ಮಾಧ್ಯಮ ಒಲಿಸಿಕೊಳ್ಳುವ ಪ್ರವೃತ್ತಿ: ಮಠಾಧೀಪತಿಗಳು ಇತ್ತೀಚೆಗೆ ಮಾಧ್ಯಮ ಒಲಿಸಿಕೊಳ್ಳುವ ಪ್ರವೃತ್ತಿ ಹಾಗೂ ದೃಶ್ಯ ಮಾಧ್ಯಮಗಳ ಒಳಗೆ ನುಗ್ಗುವ ಅಪಹಾಸ್ಯಕ್ಕೆ ಗುರಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಕಾವಿ ಹಾಕಿದ ಮಾತ್ರಕ್ಕೆ ಅವರು ಧರ್ಮಾಧಿಕಾರಿಗಳು ಆಗಲಾರರು, ಅವರು ವೇಷಧಾರಿಗಳೇ ಹೊರತು, ಅವರು ಧರ್ಮಾಧಿಕಾರಿಗಳಾಗಲು ಸಾಧ್ಯವಿಲ್ಲ. ಮಾಧ್ಯಮ ಅವರ ಬಗ್ಗೆ ಹೆಚ್ಚು ಪ್ರಚಾರ ಕೊಡುತ್ತಿರುವುದು ದುರ್ದೈವ. ಅವರು ಡೊಂಗಿ ಜನ. ಅವರಿಗೆ ಕಡಿವಾಣ ಹಾಕಲು ಮಠಗಳಿಂದ ಸಾಧ್ಯವಿಲ್ಲ. ಭಕ್ತ ವರ್ಗ ಅದಕ್ಕೆ ಮುಂದಾಗಬೇಕು ಎಂದರು.