ಅಧ್ಯಕ್ಷ ಗಾದಿಗೆ ಕಾಂಗ್ರೆಸ್, ಜೆಡಿಎಸ್ ಷಡ್ಯಂತ್ರ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.25
ನಗರಸಭೆ ಅಧ್ಯಕ್ಷ ಗಾದಿ ಮೀಸಲಾತಿ ಕುರಿತಂತೆ ಜನಾಭಿಪ್ರಾಯದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಷಡ್ಯಂತ್ರ ನಡೆಸುತ್ತಿವೆ ಎಂದು ನಗರಸಭಾ ಸದಸ್ಯ ಮುತ್ತಯ್ಯ ಆರೋಪಿಸಿದ್ದಾರೆ.
ನಗರದ ಮಾರ್ಕೆಟ್ ರಸ್ತೆ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೂತ್ ಅಧ್ಯಕ್ಷರುಗಳ ಆಯ್ಕೆ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರಳ ಬಹುಮತವನ್ನು ಜನ ಬಿಜೆಪಿಗೆ ನೀಡಿದ್ದಾರೆ. ಆದರೆ, ಕೆಲವರು ಅಧಿಕಾರಕ್ಕೆ ಮುಗಿಬಿದ್ದು ನಗರಸಭೆ ಗಾದಿಯನ್ನು ಹಿಂಬಾಗಿಲಿನಿಂದ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.
ಅಧಿಕಾರಕ್ಕಾಗಿ ಹೋರಾಟ ಮಾಡುವುದನ್ನು ಬಿಜೆಪಿ ಹೇಳಿಕೊಟ್ಟಿಲ್ಲ. ಜನ ಪ್ರತಿನಿಧಿಯಾಗಿ ವಿರೋಧ ಪಕ್ಷದಲ್ಲೆ ಕುಳಿತು ನಗರದ ಅಭಿವೃದ್ಧಿಗೆ ಮತ್ತು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಶಕ್ತಿ ನಮಗಿದೆ ಎಂದರು.
ರಾಷ್ಟ್ರದ ಹಿತ ಕಾಯಿರಿ: ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಶಾಸಕ ಸಿ.ಟಿ. ರವಿಯವರಿಗೆ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದೀರಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿ ರಾಷ್ಟ್ರದ ಹಿತ ಕಾಯುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬೂತ್ ಅಧ್ಯಕ್ಷರಾಗಿ ಆಯ್ಕೆಯಾದವರು ಸ್ಥಳೀಯವಾಗಿ ಜನರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೆ ಅದನ್ನು ನಿವಾರಿಸುವಲ್ಲಿ ಕಂಕಣ ಬದ್ದರಾಗಿದ್ದೇವೆ ಎಂದರು.
ಜಿಲ್ಲಾ ಕಾರ್ಯದರ್ಶಿ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಜನರು ತಮ್ಮ ಜನಪ್ರತಿನಿಧಿಗಳೊಂದಿಗೆ ಗಟ್ಟಿಯಾಗಿ ನಿಂತರೆ ಯಾವ ಅಧಿಕಾರವೂ ಅವಶ್ಯಕತೆ ಇರುವುದಿಲ್ಲ. ಪಕ್ಷದ ಮುಖಂಡರುಗಳ ಆಂತರಿಕ ಕಲಹದಿಂದ ರಾಜ್ಯದಲ್ಲಿ ಅಧಿಕಾರ ಕೈ ಪಾಲಾಯಿತು. ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಪೂರ್ಣಗೊಂಡಿದ್ದು. ಜೂ. 29ರೊಳಗೆ ನಗರ ಮತ್ತು ಗ್ರಾಮಾಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದರು.
ಮೋದಿ ಮುಂದಿನ ಪ್ರಧಾನಿ: ದೇಶದ ಮುಂದಿನ ಪ್ರಧಾನಿ ಮೋದಿ ಎಂದು ಮತದಾರರು ನಿರ್ಣಯಿಸಿದ್ದಾರೆ. ವಾಜಪೇಯಿ ಬಿಟ್ಟರೆ ಮೋದಿಯವರ ಬಗ್ಗೆ ದೇಶದಲ್ಲಿ ಜನಾಭಿಪ್ರಾಯದ ಆಶಾಭಾವನೆ ಬಂದಿದೆ. ಈ ಸಂಬಂಧ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಬೂತ್ ಮಟ್ಟದಿಂದಲೇ ಕಾರ್ಯಕರ್ತರು ಸಜ್ಜುಗೊಳ್ಳಬೇಕಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಯಾವ ಶಕ್ತಿಯಿಂದಲೂ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗೋಪಿನಾಥ್, ಸುರೇಶ್ ಹಾಜರಿದ್ದರು.