ತರೀಕೆರೆಯಲ್ಲಿ ಮಳೆ
ತರೀಕೆರೆ: ಕಳೆದ ನಾಲ್ಕು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ಸ್ವಲ್ಪ ಉತ್ತಮ ಮಟ್ಟದ ಮಳೆಯಾಗಿದೆ. ಪಟ್ಟಣದ ಸುತ್ತಮುತ್ತ ಮಂಗಳವಾರ ಇಡೀದಿನ ಎಡಬಿಡದೆ ಧಾರಾಕಾರ ಮಳೆ ಸುರಿಯಿತು.
ಇಂದು ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ಕಳಸಾಪುರ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಳಸಾಪುರ ವಿ.ವಿ ಕೇಂದ್ರದಿಂದ ಹೊರಡುವ ನಗರ ಮತ್ತು ಗ್ರಾಮೀಣ ಪೀಡರ್ನಿಂದ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಭೂಮಿ ಹುಣ್ಣಿಮೆ
ಚಿಕ್ಕಮಗಳೂರು: ಮನೆ ಸ್ವಚ್ಛತೆಯೊಂದಿಗೆ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ಮಹಿಳೆಯರು ಹೆಚ್ಚು ಶ್ರಮವಹಿಸಬೇಕೆಂದು ನಗರಸಭಾ ಪರಿಸರ ಅಭಿಯಂತರ ವಿನುತಾ ರಾಜ್ ಕರೆ ನೀಡಿದ್ದಾರೆ. ಅಕ್ಕಮಹಾದೇವಿ ಮಹಿಳಾ ಸಂಘದ ಶರಣೆ ಮುಕ್ತಾಯಕ್ಕ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಭೂಮಿ ಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನೆಯ ಕಸವನ್ನು ಸಂಗ್ರಹಿಸಿ ಘಂಟೆಗಾಡಿಗೆ ಹಾಕುವ ಮೂಲಕ ನಗರ ನೈರ್ಮಲ್ಯ ಕಾಪಾಡಲು ಆಸಕ್ತಿವಹಿಸಬೇಕೆಂದು ಹೇಳಿದರು.
ಸ್ಫೂರ್ತಿಯಾಗುತ್ತಾರೆ: ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಮನೆ ಕೆಲಸಕ್ಕೆ ಸೀಮಿತರಾಗದೆ ಕೀಳಿರಿಮೆಯಿಂದ ಹೊರಬಂದು ಕೆಳಗಿರುವವರನ್ನು ಮೇಲೆತ್ತಲು ಶ್ರಮಿಸಬೇಕು. ಅಕ್ಕಮಹಾದೇವಿ, ಅಕ್ಕನಾಗಮ್ಮ, ಮುಕ್ತಾಯಕ್ಕ ಮತ್ತಿತರ ವಚನಕಾರ್ತಿಯರು ನಮಗೆ ಸ್ಫೂರ್ತಿಯಾಗುತ್ತಾರೆ ಎಂದರು. ಮಹಿಳೆಯರಿಗೆ ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯನೀಡಿ ಮಹಿಳಾ ವಿಮೋಚನೆಗೆ ಮೊದಲಧ್ವನಿ ತಂದುಕೊಡಲಾಗಿತ್ತು. ಭಾರತದ ಇತಿಹಾಸದಲ್ಲಿ 12ನೇ ಶತಮಾನದ ಶರಣ ಚಳುವಳಿಗೆ ವಿಶೇಷವಾದ ಸ್ಥಾನವಿದೆ ಎಂದು ವಿನುತಾ ಹೇಳಿದರು. ಅಕ್ಕಮಹಾದೇವಿ ಮಹಿಳಾ ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಚ್ಛತೆ ಪಾಲನೆಯ ಮೂಲಕ ಡೆಂಘೀ ಸೇರಿದಂತೆ ಮಾರಕರೋಗಗಳಿಂದ ದೂರವಿರಬಹುದೆಂದರು. ಕಾರ್ಯದರ್ಶಿ ಹೇಮಾಲತಾ, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಹ ಖಜಾಂಚಿ ರೇಖಾ ಉಮಾಶಂಕರ್ ಇದ್ದರು. ತಂಡದ ಮುಖ್ಯಸ್ಥೆ ವನಜಾಕ್ಷಮ್ಮ ಶಿವರುದ್ರಯ್ಯ ಪ್ರಾಸ್ತಾವಿಸಿದರು. ಲತಾ ಮಹೇಶ್ ಸ್ವಾಗತಿಸಿದರು, ವಿಮಲಾ ರಾಜಶೇಖರ್ ನಿರೂಪಿಸಿದರು, ಶಿಕ್ಷಕಿ ಪ್ರತಿಭಾ ವಂದಿಸಿದರು. ರಾಜೇಶ್ವರಿ ಶಾಂತಪ್ಪ ವಚನಗಾಯನ, ಶರಣೆ ಮುಕ್ತಾಯಕ್ಕ ತಂಡದಿಂದ ರೂಪಕ ಅಭಿನಯಿಸಲಾಯಿತು.