ವರದಕ್ಷಿಣೆ ಕಿರುಕುಳ- ಆತ್ಮಹತ್ಯೆ: ಪತಿ, ಅತ್ತೆಗೆ 10 ವರ್ಷ ಜೈಲು
ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯ ಆತ್ಮಹತ್ಯೆಗೆ ಕಾರಣರಾದ ಪತಿ ಮತ್ತು ಅತ್ತೆಗೆ ಜಿಲ್ಲಾ ನ್ಯಾಯಾಲಯ 10 ವರ್ಷ ಶಿಕ್ಷೆ ಹಾಗೂ 2.90 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆಯ ಬೆಳವನೂರು ಗ್ರಾಮದ ಡಿ.ಆರ್. ಹಾಲಮ್ಮ ಎಂಬವರನ್ನು ಚಿಕ್ಕಮಗಳೂರು ನಗರದ ಕೋಟೆಯ ಪರಮೇಶ ಎಂಬಾತನಿಗೆ 2009ರ ಸೆಪ್ಟೆಂಬರ್ 24ರಂದು ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಬಳಿಕ ಗಂಡ ಮತ್ತು ಇತರರು ಸೇರಿ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಹಿಂಸೆ ತಾಳಲಾರದೆ ಹಾಲಮ್ಮ 2010ರ ನವೆಂಬರ್ 20 ರಂದು ವಿಷ ಸೇವಿಸಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ನಗರ ಠಾಣಾ ಪೊಲೀಸರು ತನಿಖೆ ನಡೆಸಿ, ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಎ. ಪಾಟೀಲ್ ಅವರು, ಕೃತ್ಯ ಸಾಬೀತಾಗಿದ್ದರಿಂದ ಮೃತಳ ಗಂಡ ಪರಮೇಶ ಹಾಗೂ ಆತನ ತಾಯಿ ಸೀತಮ್ಮ ಇವರಿಗೆ ತಲಾ 10 ವರ್ಷ ಶಿಕ್ಷೆ ವಿಧಿಸಿದ್ದು, ವಿವಿಧ ಕಲಂಗಳಡಿ ಒಟ್ಟು 2.90 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ 2.50 ಲಕ್ಷವನ್ನು ಪ್ರಕರಣದ ಪಿರ್ಯಾದುದಾರ, ಮೃತಳ ಸಹೋದರ ಗುರುಶಾಂತಪ್ಪ ಇವರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಆರ್. ಉಪಾಧ್ಯೆ ಮೊಕದ್ದಮೆಯನ್ನು ನಡೆಸಿದ್ದರು