ಸಬೂಬು ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಿ
ಕ.ಪ್ರ. ವಾರ್ತೆ ಶೃಂಗೇರಿ ಜೂ.25
ಕೆಲಸಕ್ಕೆ ಬಾರದ ವಾದ ಬೇಡ, ವಾದಗಳಲ್ಲಿ ಅರ್ಥವಿಲ್ಲ. ಸುಳ್ಳು ಸಬೂಬು ಹೇಳಬೇಡಿ, ಸರಿಯಾಗಿ ಕರ್ತವ್ಯ ನಿರ್ವಹಿಸಿ ಜನರಿಗೆ ನ್ಯಾಯ ದೊರಕಿಸಿಕೊಡಲು ಪ್ರಾರ್ಮಾಣಿಕ ಪ್ರಯತ್ನ ಮಾಡಿ ಎಂದು ಶಾಸಕ ಡಿ.ಎನ್. ಜೀವರಾಜ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳಿಗೆ ತರಾಟೆ: ಸಭೆಗಳಿಗೆ ಹಾಜರಾಗಿ, ಸಲಹೆ ಸೂಚನೆಗಳನ್ನು ಪಾಲಿನ ವರ್ತನೆಗಳನ್ನು ಬದಲಾಯಿಸಿಕೊಳ್ಳಿ. ಜನರ ಸಹಕಾರದೊಂದಿಗೆ ಕೆಲಸ ಮಾಡಿ ಎಂದ ಅವರು, ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಯೋಜನೆಗಳ ವರದಿ ಪಡೆದು ಅವುಗಳಲ್ಲಿನ ಲೋಪದೋಷಗಳ ಕುರಿತು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೊರರಾಜ್ಯಗಳ ವ್ಯಕ್ತಿಗಳು ಇಲ್ಲಿ ನಕಲಿ ಕೃಷಿ ಪ್ರಮಾಣಪತ್ರ ನೀಡಿ ಜಮೀನುಗಳನ್ನು ಪಡೆದು ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಮೂಲನಿವಾಸಿಗಳ ಜಮೀನುಗಳಲ್ಲಿನ ಅಡಕೆ ತೋಟಗಳನ್ನು ಬಲವಂತವಾಗಿ ಕಡಿದು ಹಾಕಿ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ. ಕೇವಲ ಕಾನೂನು ದೃಷ್ಟಿಯಿಂದ ಎಲ್ಲವು ಬೇಡ, ಮಾನವೀಯತೆ ಇರಲಿ. ಅಲ್ಲಿನ ಮೂಲನಿವಾಸಿಗಳ ಬದುಕಿನ ಪ್ರಶ್ನೆಯಾಗಿದೆ. ಅವರ ಬದುಕಿನ ಬಗ್ಗೆ ಚಿಂತಿಸಬೇಕು ಎಂದರು.
ಪೊಲೀಸರಿಗೆ ತಿಳಿಸಿ: ಆರೋಗ್ಯಇಲಾಖೆಗೆ ಸಂಬಂಧಿಸಿದ ವರದಿಯನ್ನು ಪರಿಶೀಲಿಸಿ ಕರುಣಾ ಟ್ರಸ್ಟ್ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರಿಯಾಗಿ ನಿರ್ವಹಿಸಿಕೊಂಡು ಹೋಗಿ ಜನರಿಗೆ ತೊಂದರೆ ನೀಡಬೇಡಿ ಎಂದ ಅವರು, ಆರೋಗ್ಯ ಸಹಾಯಕಿಯರು ತಾವು ಕೆಲಸ ಮಾಡುವ ಪ್ರದೇಶಗಳಲ್ಲಿ ಕುಡುಕರು ಗಲಾಟೆ ಮಾಡಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾರೆ ಎಂದಾಗ ಅಂತಹವರ ಬಗ್ಗೆ ಪೊಲೀಸರಿಗೆ ತಿಳಿಸಿ ಕರ್ತವ್ಯ ನಿರ್ವಹಿಸಿ ಎಂಬ ಸಲಹೆ ನೀಡಿ ಎಂದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ, ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ 40 ಬಾವಿಗಳ ಕಾಮಗಾರಿ ಪ್ರಗತಿಯಲ್ಲಿವೆ. ಅವುಗಳ ಕಾಮಗಾರಿ ಪೂರ್ಣಗೊಳ್ಳಲು ಬಂಡೆಗಳು ಅಡ್ಡಿಯಾಗಿವೆ ಎಂಬ ಅಧಿಕಾರಿಗಳ ಹೇಳಿಕೆ ಬಗ್ಗೆ ತೀವ್ರ ಆಕ್ರೋಶಗೊಂಡ ಅನಗತ್ಯ ಬಾವಿಗಳ ನಿರ್ಮಾಣ ಬೇಡ. 40 ಬಾವಿಗಳಿಗೂ ಬಂಡೆಕಲ್ಲುಗಳು ಅಡ್ಡಿಯಾಗಿವೆ ಎಂಬ ಸಬೂಬು ಬೇಡ. ಮೊದಲು ಸರಿಯಾಗಿ ಪರಿಶೀಲಿಸಿ ಆಗ್ರಹಿಸಿದರು.
ಕಾಮಗಾರಿ ಕುಂಠಿತಗೊಳಿಸಬೇಡಿ: ಗುತ್ತಿಗೆದಾರರ ಸಮಸ್ಯೆಯಿದ್ದರೆ ಅದನ್ನು ಗಮನಕ್ಕೆ ತನ್ನಿ. ಗುತ್ತಿಗೆದಾರರು ಯಾವುದೇ ಪಕ್ಷಕ್ಕೆ ಸೇರಿರಲಿ. ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ರಾಜಕೀಯ ಬೇಡ. ಗುತ್ತಿಗೆದಾರರ ಹಾವಳಿಯಿಂದ ಕಾಮಗಾರಿ ಕುಂಠಿತ ಬೇಡ ಎಂದರು. ತಾಪಂ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ಪುಷ್ಪಲಕ್ಷ್ಮಿನಾರಾಯಣ್, ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್, ಜಿಪಂ ಸದಸ್ಯ ಬಿ. ಶಿವಶಂಕರ್, ಕಾರ್ಯನಿರ್ವಹಣಾಧಿಕಾರಿ ಶರಶ್ಚಂದ್ರ ಉಪಸ್ಥಿತರಿದ್ದರು.